ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿರುವದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದೊಳಗೆ ಬರುವ ಬಸ್ ಏರಲು ಒಮ್ಮೆಲೆ ಓಡಿ ಹೋಗಿ ಹತ್ತುವದು ಕಂಡುಬಂದಿತ್ತು. ಇದರಿಂದಾಗಿ ವೃದ್ಧ ಪ್ರಯಾಣಿಕರು, ಮಕ್ಕಳು ಪರದಾಡುವಂತಾಯಿತು.
ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯನವರ ಸಮಾವೇಶ ಇರುವದರಿಂದಾಗಿ ಹೆಚ್ಚಿನ ವಾಹನಗಳು ಲಭ್ಯವಿರದ ಕಾರಣದಿಂದಾಗಿ ದೂರ ಊರುಗಳಿಗೆ ತೆರಳುವ ಬಸ್ ಕಾರ್ಯಾಚರಣೆ ರದ್ದು ಪಡಿಸಿದ್ದ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಪ್ರತಿನಿತ್ಯ ಬೆಳಗ್ಗೆ 7.15 ಗಂಟೆಗೆ ಬಸವನಬಾಗೇವಾಡಿಯಿಂದ ಹುಬ್ಬಳ್ಳಿಗೆ ತೆರಳುವ ಬಸ್ ಗೆ ತೆರಳಲು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಹುಬ್ಬಳ್ಳಿ ಬಸ್ ಗೆ ತೆರಳಲು ಕಾಯುತ್ತಿರುವದು ಕಂಡುಬಂದಿತ್ತು. 7.30 ಗಂಟೆಯಾದರೂ ಬಸ್ ಬಾರದೇ ಇರುವದನ್ನು ಗಮನಿಸಿದ ಪ್ರಯಾಣಿಕರು ಸಾರಿಗೆ ನಿಯಂತ್ರಕರನ್ನು ಕೇಳಿದಾಗ ಕೊಪ್ಪಳಕ್ಕೆ ಬಸ್ ಸಿಸಿ ಹೋಗಿವೆ. ದೂರದ ಊರುಗಳಿಗೆ ತೆರಳುವ ಬಸ್ ಕಾರ್ಯಾಚರಣೆ ಇಂದು ರದ್ದುಪಡಿಸಲಾಗಿದೆ. ಕೇವಲ ಸ್ಥಳೀಯ ಬಸ್ ಕಾರ್ಯಾಚರಣೆ ಮಾತ್ರ ಇಂದು ಇದೆ. ಪ್ರಯಾಣಿಕರು ಸಹಕರಿಸಬೇಕೆಂದು ಹೇಳಿದರು.
ಹುಬ್ಬಳ್ಳಿ ಬಸ್ ಗೆ ತೆರಳುವ ಒರ್ವ ವಿದ್ಯಾರ್ಥಿನಿಯ ತಂದೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬಸ್ ರದ್ದು ಮಾಡಿರುವ ಕುರಿತು ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ತಿಳಿಸಬೇಕು. ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಾವು ಕೇಳಿದಾಗ ದೂರದ ಊರುಗಳಿಗೆ ತೆರಳುವ ಬಸ್ ಕಾರ್ಯಾಚರಣೆ ಇಂದು ರದ್ದುಪಡಿಸಿಲಾಗಿದೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ನನ್ನ ಮಗಳು ಹುಬ್ಬಳ್ಳಿ ಬಸ್ ಮೂಲಕ ಗದ್ದನಕೇರಿ ಕ್ರಾಸ್ ವರೆಗೆ ತೆರಳಿ ಬೆಳಗಾವಿಗೆ ಹೋಗಿ ಮಧ್ಯಾನ್ಹ ಕಾಲೇಜಿನ ತರಗತಿಗೆ ಹಾಜರಾಗಬೇಕು. ನೀವು ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡಿದರೆ ಹುಬ್ಬಳ್ಳಿ ಬಸ್ ಗೆ ಕಾಯ್ದದೇ ಕೊಲ್ಹಾರ ಬಸ್ ಗೆ ಹೋಗಿ ಮುಂದೆ ಬೇರೆ ಬಸ್ ಮೂಲಕ ನನ್ನ ಮಗಳು ತೆರಳಲು ಅನುಕೂಲವಾಗುತ್ತಿತ್ತು. ಈಗ ಅವಳಿಗೆ ತಡವಾಗಿದೆ ಎಂದು ಅಧಿಕಾರಿಗಳ ಮುಂದೆ ತಮ್ಮ ಆಕ್ರೋಶ ಹೊರಹಾಕುವದು ಕಂಡುಬಂದಿತ್ತು.
ಇಂದು ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿರುವದರಿಂದಾಗಿ ಬಸ್ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ಕಂಡುಬಂದರು. ವಿಜಯಪುರ, ಕೊಲ್ಹಾರ, ನಿಡಗುಂದಿ, ದೇವರಹಿಪ್ಪರಗಿ ಸೇರಿದಂತೆ ಸ್ಥಳೀಯವಾಗಿ ಊರುಗಳಿಗೆ ತೆರಳುವ ಬಸ್ ಕಾರ್ಯಾಚರಣೆ ಎಂದಿನಂತೆ ಇರುವದು ಕಂಡುಬಂದಿತ್ತಾದರೂ ಬಸ್ ನಲ್ಲಿ ನೂಕ್ಕುನುಗ್ಗಲು ಕಂಡುಬಂದಿತ್ತು. ಪ್ರತಿಯೊಂದು ಬಸ್ಸಿನಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗುವದು ಕಂಡುಬಂದಿತ್ತು.
ಈ ಕುರಿತು ಬಸ್ ಘಟಕದ ವ್ಯವಸ್ಥಾಪಕ ಚಿತ್ತವಾಡಗಿ ಅವರನ್ನು ಸಂಪರ್ಕಿಸಿದಾಗ, ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು,ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಬಸ್ ಗಳು ಹೋಗಿವೆ. ವಾಹನಗಳ ಲಭ್ಯವಿರದ ಕಾರಣದಿಂದಾಗಿ ದೂರದ ಊರುಗಳಿಗೆ ತೆರಳುವ ಬಸ್ ಕಾರ್ಯಾಚರಣೆ ಇಂದು ರದ್ದುಪಡಿಸಲಾಗಿದೆ. ಸ್ಥಳೀಯ ಬಸ್ ಕಾರ್ಯಾಚರಣೆ ಎಂದಿನಂತೆ ಇದೆ. ಇದರ ಕುರಿತು ನಿಯಂತ್ರಕರ ಕೋಣೆಯ ಗೋಡೆಗೆ ಮಾಹಿತಿ ಅಂಟಿಸಲಾಗಿದೆ. ಇಂದು ಪ್ರಯಾಣಿಕರು ಸಹಕರಿಸಬೇಕು ಎಂದು ಹೇಳಿದರು.

