ಶಾಸಕ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಿಷಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರವಾಹ ಪರಿಸ್ಥಿತಿಯಿಂದಾಗಿ ಈ ಭಾಗದ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ರವಾಹ ಬಂದಾಗ ಈ ಬಗ್ಗೆ ಯೋಚನೆ ಮಾಡಿದರೆ ಸಾಲದು, ತುಂಗಭದ್ರಾ ನದಿಯ ನಿರ್ವಹಣೆಯನ್ನು ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿಯಾಗಿ ನಿರ್ವಹಣೆ ಮಾಡುತ್ತದೆ. ಭೀಮಾ, ಸೀನಾ ನದಿ ವಿಚಾರದಲ್ಲೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಂಟಿ ನಿರ್ವಹಣೆ ಅಗತ್ಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಪಾದಿಸಿದರು.
ಪ್ರವಾಹ ಪರಿಸ್ಥಿತಿ ವಿಷಯವಾಗಿ ಕೈಗೊಳ್ಳಬೇಕಾದ ಬಹುಮುಖ್ಯ ಅಂಶಗಳನ್ನು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿರುವ ಇಂಡಿ ಶಾಸಕರು ಮತ್ತೊಮ್ಮೆ ಈ ವಿಷಯವನ್ನು ಪ್ರಬಲವಾಗಿ ಸರ್ಕಾರದ ಮುಂದೆ ಇರಿಸಿದರು.
ಜನರ ವಿಷಯ ಬಂದಾಗ ಆಡಳಿತ ಪಕ್ಷದಲ್ಲಿಯೇ ಇದ್ದರೂ ಅದನ್ನು ಸಾತ್ವಿಕವಾಗಿ ಟೀಕಿಸುವ ಯಶವಂತರಾಯಗೌಡ ಪಾಟೀಲ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಜೊತೆ ಜಂಟಿ ನಿರ್ವಹಣೆಗೆ ಅಗತ್ಯತೆಯನ್ನು ಒತ್ತಾಯಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೃಷ್ಣಾ, ಕಾವೇರಿ ಜತೆಗೆ ಉಪ ನದಿಗಳ ಬಗ್ಗೆ ಗಮನ ಹರಿಸಬೇಕು. ಮಹಾರಾಷ್ಟ್ರ ಸರ್ಕಾರ ಅನೇಕ ವಿಷಯದಲ್ಲಿ ನಿಯಮಾವಳಿ ಮೀರಿ ವರ್ತನೆ ಮಾಡಿದೆ, ಇದು ಸಹ ಪ್ರವಾಹ ಪರಿಸ್ಥಿತಿ ಗಂಭೀರ ರೂಪಕ್ಕೆ ತಾಳುವಲ್ಲಿ ಕಾರಣವಾಗಿದೆ, ಪ್ರವಾಹ ನಿರ್ವಹಣೆ ಮಾಡುವುದು ಎಲ್ಲ ಸರ್ಕಾರಗಳ ಹೊಣೆಯಾಗಿದ್ದು, ಆಯಾ ರಾಜ್ಯಗಳ ನೀರಿನ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಬಿಜೆಪಿ ನಾಯಕರು ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಿರುವುದಕ್ಕೆ ಸ್ವಾಗತಿಸುತ್ತೇನೆ, ಅವರು ಕೇಂದ್ರ ಸರ್ಕಾರಕ್ಕೆ ಈ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟು ಪರಿಹಾರವನ್ನು ಬಿಡುಗಡೆ ಮಾಡಿಸುವ ಕೆಲಸ ಮಾಡಿಸಲಿ, ಇಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ಇದೆ ಎಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸಬಾರದು, ಈ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಡಾ.ಮನಮೋಹನ್ ಸಿಂಗ್ ಬಂದು ಪರಿಶೀಲನೆ ಮಾಡಿದ್ದರು. ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಪರಿಹಾರ, ನೆರವು ಕೊಡಿಸುವ ಪ್ರಯತ್ನ ಮಾಡಲಿ. ರಾಜ್ಯಗಳ ಹಾಗೂ ಕೇಂದ್ರ ಸರ್ಕಾರಗಳು ಜಂಟಿ ಜವಾಬ್ದಾರಿ ಹೊತ್ತು, ಅದನ್ನು ಪರಿಹಾರ ಕಾರ್ಯವನ್ನು ಮಾಡಬೇಕಿದೆ ಎಂದರು.
ದೇಶ, ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಮಳೆಹೆಚ್ಚಾಗಿದೆ. ಮಹಾರಾಷ್ಟ್ರದ ಭೀಮಾ, ಸೀನಾ ಹೆಚ್ಚಿನ ಪ್ರವಾಹ ಬಂದಿದೆ. ಸೀನಾ ನದಿಯಲ್ಲಿ ಹಿಂದೆಂದೂ ಇಷ್ಟೊಂದು ಪ್ರವಾಹ ಇರಲಿಲ್ಲ. ಆದರೆ ಈ ಬಾರಿಯ ಪ್ರವಾಹ ರೈತರ ಆತ್ಮಸ್ಥೆöÊರ್ಯವನ್ನೇ ಕುಗ್ಗಿಸಿದೆ. ರಾಜ್ಯದಲ್ಲಿ ಈ ಪ್ರವಾಹ ಪರಿಸ್ಥಿತಿಯಿಂದಾಗಿ ಅಂದಾಜು ೧೦ ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ, ಅದರಲ್ಲಿ ೨.೨೭ ಲಕ್ಷ ಹೆಕ್ಟೇರ್ ಬೆಳೆ ವಿಜಯಪುರದಲ್ಲಿ ಹಾನಿಯಾಗಿದ್ದರೆ, ಇಂಡಿ ತಾಲೂಕಿನಲ್ಲಿ ೯೭ ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದರು.
ಸೊನ್ನ ಬ್ಯಾರೆಜ್ ನಲ್ಲಿ ನೀರಿನ ಅವೈಜ್ಞಾನಿಕ ನಿರ್ವಹಣೆ ಆಗುತ್ತಿತ್ತು. ಈ ಬಾರಿ ಮುಂಚಿತವಾಗಿ ಎಲ್ಲ ಗೇಟ್ ಗಳ ತೆರೆದು ಪ್ರವಾಹದ ಪ್ರಮಾಣದ ತಗ್ಗಿಸುವ ಯತ್ನ ಮಾಡಲಾಗಿದೆ.
ನಾಲ್ಕು ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ಮಾಡಿ, ಪರಿಹಾರವನ್ನೂ ಸಿಎಂ ಘೋಷಿಸಿದ್ದಾರೆ. ಮೂಲಭೂತ ಸೌಕರ್ಯಗಳ ಹಾನಿಯಾಗಿದೆ. ಮಣ್ಣು ಗಟ್ಟಿ ಇರದ ಕಾರಣಕ್ಕಾಗಿ ರಸ್ತೆಗಳು ಹಾಗೂ ಮನೆಗಳು ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಯಶವಂತರಾಗೌಡ ಪಾಟೀಲ ವಿಶ್ಲೇಷಿಸಿದರು.
ನಾಲ್ಕು ಬಾರಿ ಜಿಲ್ಲಾ ಪಂಚಾಯತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನನಗೆ ಜನರ ಮತ ಹಾಕಿದ್ದಾರೆ. ಹೀಗಾಗಿ ಬೆಂಗಳೂರು, ವಿಜಯಪುರದಲ್ಲಿ ಕುಳಿತು ಯಶವಂತರಾಯಗೌಡರು ಎಲ್ಲಿದ್ದಾರೆ ಎಂದು ಕೇಳುವ ಬದಲಿಗೆ, ಕ್ಷೇತ್ರದ ಜನರು ಕೇಳಿದರೆ ಗೊತ್ತಾಗುತ್ತದೆ.
ನಾನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು ನಮ್ಮ ಸರ್ಕಾರಕ್ಕೆ ಮನವಿ, ಒತ್ತಾಯ ಮಾಡುತ್ತೇನೆ. ಕೇಂದ್ರದ ಸರ್ಕಾರದ ಪ್ರತಿನಿಧಿಗಳು ಈ ಕೆಲಸ ಮಾಡಲಿ, ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದರು.
ಹುದ್ದೆ ಭರ್ತಿ ಮಾಡಿ: ವಿಪತ್ತು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ರಚಿಸಿ
ಪ್ರತಿ ಬಾರಿ ಪ್ರವಾಹ ಬಂದಾಗ ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸಮೀಕ್ಷೆ ನಡೆಯಬೇಕು, ಆದರೆ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳೇ ಖಾಲಿ ಇವೆ, ಈ ಖಾಲಿ ಇರುವ ಹುದ್ದೆಗಳಿಂದ ಬೆಳೆ ಹಾನಿ ಸಮೀಕ್ಷೆಗೂ ಸಹ ತೊಡಕಾಗುವ ಸಾಧ್ಯತೆ ಇದೆ, ಪ್ರತಿ ಬಾರಿ ವಿಪತ್ತುಗಳು ಸಂಭವಿಸಿದಾಗ ಕೃಷಿ ಇಲಾಖೆಯನ್ನೇ ಅವಲಂಬಿಸುವುದನ್ನು ಬಿಟ್ಟು ವಿಪತ್ತು ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಯೇ ರಚನೆ ಮಾಡಬೇಕು, ವಿಪತ್ತು ನಿರ್ವಹಣಾ ವಿಷಯವಾಗಿ ಕಾರ್ಯನಿರ್ವಹಿಸುವ ಕೃಷಿ, ತೋಟಗಾರಿಕೆ, ಕಂದಾಯ ಮೊದಲಾದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

