ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿ ಕಾರ್ಯದಲ್ಲಿ ನಿರತ ಶಿಕ್ಷಕನಿಗೆ ಜೋಡಿ ನಾಯಿಗಳು ಕಡಿದು ಆಸ್ಪತ್ರೆ ಸೇರುವಂತಾಗಿದೆ.
ಶನಿವಾರ ಎಂದಿನಂತೆ ಸಾಯಂಕಾಲದ ಸಮಯದಲ್ಲಿ ದೇವರನಿಂಬರಗಿ ಗ್ರಾಮದ ಮುಲ್ಲಾ ವಸ್ತಿಗೆ ಗಣತಿ ಮಾಡಲು ಹೋಗುವ ಸಂದರ್ಭದಲ್ಲಿ ವಸತಿಯಲ್ಲಿ ಇರುವ ಎರಡು ನಾಯಿಗಳು ಧಿಡಿರ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ಗಾಯಗೊಂಡ ಶಿಕ್ಷಕ ಶ್ರೀಶೈಲ್ ಮಾಳಿ ಅವರು ದೇವರ ನಿಂಬರಗಿಯ ಎಲ್.ಪಿ.ಎಸ್.ಮಣಿಯಾರ ವಸ್ತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೊಲದಲ್ಲಿ ಮನೆ ಮಾಡಿಕೊಂಡು ವಾಸಿಸುವ ಜನರ(ವಸ್ತಿಯಲ್ಲಿರುವ) ಶಿಕ್ಷಕರು ಗಣತಿ ಕಾರ್ಯ ಮಾಡುವದರಿಂದ ಇಂಥಹ ಪರಿಸ್ಥಿತಿ ಬರುವ ಸಾಧ್ಯತೆ ಹೆಚ್ಚು ಆದ್ದರಿಂದ ಚಡಚಣ ಶಿಕ್ಷಣ ಇಲಾಖೆಯ ಬಿಇಓ,ಗ್ರಾಮ ಪಂಚಾಯತಿಯ ಪಿಡಿಓ, ಪ.ಪಂಚಾಯತಿಯ ಸಿಓ ಅವರು ಇನ್ನು ಮುಂದಾದರು ಎಚ್ಚತ್ತುಕೊಂಡು ಸಾರ್ವಜನಿಕರಿಗೆ ಡಂಗುರ ಸಾರಿ ಸಾಕು ಪ್ರಾಣಿ ನಾಯಿಗಳನ್ನು ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಟ್ಟಿಹಾಕಲು ತಿಳಿಸಿದರೆ ಇಂಥಹ ಅನಾಹುತ ತಪ್ಪಿಸಬಹುದು.ಗಣತಿ ಮಾಡಲು ಬಂದ ಶಿಕ್ಷರಿಗೆ ನಾಯಿ ಕಡಿದು ಮುಂದೆ ಆಗುವ ರ‍್ಯಾಬಿಸ್ ರೊಗ ವನ್ನು ತಡೆಗಟ್ಟಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೆ ಎಂದು ಕಾದು ನೋಡಬೇಕಾಗಿದೆ.


