ಉಮರಜ ಶಿಥಿಲ ಶಾಲೆಗೆ ಅಪರ ಆಯುಕ್ತ ಡಾ.ಉಳ್ಳಾಗಡ್ಡಿ ಭೇಟಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಶೀಲನೆ | ಕೂಡಲೆ ಕ್ರಮಕ್ಕೆ ಚಡಚಣ ಬಿಇಓ ಅವರಿಗೆ ಆದೇಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಅ.03 ಶುಕ್ರವಾರ ಚಡಚಣ ತಾಲೂಕಿನ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಮರಜ ಶಾಲೆಗೆ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರು ಸದರಿ ಶಾಲೆಯ ಕುರಿತು ಗ್ರಾಮಸ್ಥರ ದೂರು ಹಾಗೂ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಗ್ರಾಮಕ್ಕೆ ಸೆ.24 ರಂದು ಉಮರಜ ಗ್ರಾಮಕ್ಕೆ ಭೇಟಿಕೊಟ್ಟು ಮಳೆಯಿಂದಾಗಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ತಕ್ಷಣ ನಾಲ್ಕು ಹೊಸ ಕೊಣೆಗಳನ್ನು ನಿರ್ಮಿಸಿಕೊಡುವದಾಗಿ ಭರವಸೆ ಕೊಟ್ಟ ವರದಿ ’ಉದಯ ರಶ್ಮಿ’ ದಿನಪತ್ರಿಕೆಯಲ್ಲಿ ಸೆ.26 ರಂದು ಪ್ರಕಟವಾದ ಆಧಾರದ ಮೇಲೆ ಸಂದರ್ಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ’ಉದಯರಶ್ಮಿ’ ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಕುರಿತಾಗಿ ವೀಕ್ಷಣೆ ಮಾಡಲಾಗಿ, ಶಾಲೆಯ ಕೆಲವು ಕೊಠಡಿಗಳು ದುರಸ್ತಿ ಅಂಚಿನಲ್ಲಿದ್ದು, ಮಕ್ಕಳ ಹಿತದೃಷ್ಟಿಯಿಂದ ಸದರಿ ಕೊಠಡಿಗಳನ್ನು ಹೊರತುಪಡಿಸಿ, ಉಳಿದ ಸುರಕ್ಷಿತವಾಗಿರುವ ಕೊಠಡಿಗಳಲ್ಲಿ 1 ರಿಂದ 4 ನೇ ತರಗತಿಯ ಪಾಠಬೋಧನೆಯನ್ನು ನಡೆಸುವಂತೆ ಹಾಗೂ 5 ರಿಂದ 7 ನೇ ತರಗತಿಯ ಪಾಠಬೋಧನೆಯನ್ನು ಉಮರಜದ ಸರಕಾರಿ ಪ್ರೌಢ ಶಾಲೆಯಲ್ಲಿ ಲಭ್ಯವಿರುವ ಕೊಠಡಿಗಳಲ್ಲಿ ನಡೆಸುವಂತೆ ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಡಚಣ ಇವರಿಗೆ ಆದೇಶಿಸಲಾಯಿತು.
ಸದರಿ ಶಾಲೆಯ ದುರಸ್ತಿ ಹಾಗೂ ಪಾಠ ಬೋಧನೆ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಸೂಚಿಸಲಾಯಿತು. ಮುಂದುವರೆದು ಚಡಚಣ ಹಾಗೂ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಂದರ್ಶನ ನೀಡಿ ಸಾರ್ವಜನಿಕರು ಹಾಗೂ ಶಿಕ್ಷಕರಿಗೆ ನೀಡಬೇಕಾದ ಸೇವಾ ಸೌಲಭ್ಯಗಳನ್ನು ನಿಗದಿಪಡಿಸಲಾದ ಸಮಯದೊಳಗೆ ನಿಯಮಾನುಸಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಕುರಿತು ಪರಿಶೀಲನೆ ಮಾಡಿ ಕಛೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮಾರ್ಗದರ್ಶನ ನೀಡಲಾಯಿತು.

