ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪವಿತ್ರ ಪುಷ್ಪಗಳಿಂದ ರೂಪಿಸಲಾದ ಬೃಹತ್ ಗಾತ್ರದ ಪಂಚ ಝೇಲಾಗಳು (ವೃತ್ತಾಕಾರದ ಪುಷ್ಪಾಲಂಕಾರ).. ಮುಗಿಲು ಮುಟ್ಟಿದ ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್ ಎಂಬ ಪವಿತ್ರ ಉದ್ಘೋಷ.. ಮಾನವೀಯತೆಯ ತತ್ವಗಳನ್ನು ಸಾರಿದ ಹಜರತ್ ಗೌಸ್ ಏ ಅಜಂ ಅವರ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಪ್ರಯುಕ್ತ ಶನಿವಾರ ಭವ್ಯ ಭಕ್ತಿ-ಸದ್ಭಾವ ಯಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಅರ್ಕಾಟ್ ದರ್ಗಾದ ಸಜ್ಜಾದೆ ನಶೀನ್ ಸೈಯ್ಯದ್ ಇಕ್ಬಾಲ್ ಪೀರಾ ಹಾಗೂ ಡಾ.ತಖೀಪೀರಾ ಹುಸೈನಿ ಅವರ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು `ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್’ ಎಂದು ಭಕ್ತಿಭಾವದಿಂದ ಘೋಷಣೆ ಮೊಳಗಿಸುತ್ತಾ, ಪವಿತ್ರ ಧ್ವಜಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಜಾಮೀಯಾ ಮಸಜೀದ, ಶಹಾಪೇಟಿ, ಶಹಾಪೂರ ದರ್ವಾಜಾ, ಮದೀನಾ ನಗರ, ಬಡಿಕಮಾನ್ ಹೀಗೆ ನಾನಾ ಭಾಗಗಳಿಂದ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಿಜಯಪುರ ಅಷ್ಟೇ ಅಲ್ಲದೇ ಬಾಗಲಕೋಟ, ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ ಸೇರಿದಂತೆ ನೆರೆಯ ಮಹಾರಾಷ್ಟçದ ಸೊಲ್ಲಾಪೂರ, ಪುಣೆ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಭಕ್ತ ಸಮೂಹ ಆಗಮಿಸಿ ಮೆರವಣಿಗೆಯಲ್ಲಿ ಭಾಗವಹಿಸಿತು.
ವಿಜಯಪುರದ ಸೊಲ್ಲಾಪೂರ ನಾಕಾದಿಂದ ಆರಂಭಗೊಂಡ ಈ ಯಾತ್ರೆ ಗಾಂದಿವೃತ್ತ, ಬಡಿಕಮಾನ್, ಜಾಮೀಯಾ ಮಸೀದಿ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅರ್ಕಾಟ್ ದರ್ಗಾ ತಲುಪಿ ಸಂಪನ್ನಗೊಂಡಿತು. ದಾರಿಯುದ್ದಕ್ಕೂ ಭಕ್ತದಿಗಳಿಗೆ ಕುಡಿಯುವ ನೀರು ಹಾಗೂ ತಂಪು ಜ್ಯೂಸ್ ವ್ಯವಸ್ಥೆ ಮಾಡಲಾಗಿತ್ತು.
ಧರ್ಮ ಸಂದೇಶ
ಧರ್ಮ ಸಂದೇಶ ನೀಡಿದ ಧರ್ಮಗುರು ಹಾಗೂ ಆಯುರ್ವೇದ ವೈದ್ಯ ಡಾ.ಸೈಯ್ಯದ್ ತಖೀಪೀರಾ ಹುಸೈನಿ ಮಾತನಾಡಿ, ಹಜರತ್ ಗೌಸ್ ಪಾಕ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿತ್ವವುಳ್ಳ ಚೇತನ, ಮಾನವೀಯತೆಗೆ ಹೆಸರಾಗಿದ್ದ ಅವರು ಶಾಂತಿ, ಸದ್ಭಾವದ ಸಂದೇಶ ಸಾರಿದ್ದಾರೆ, ಅವರ ತತ್ವಗಳನ್ನು ನಾವು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ವಿಜಯಪುರದ ಐತಿಹಾಸಿಕ ಅರ್ಕಾಟ್ ದರ್ಗಾ ದುವಾ-ದವಾಗೆ ಹೆಸರುವಾಸಿಯಾಗಿದೆ, ಭಕ್ತಿಭಾವದ ಕೇಂದ್ರವಾಗಿದೆ ಎಂದರು. ನಮ್ಮ ಭವ್ಯ ಭಾರತದ ಸಮೃದ್ಧಿಗಾಗಿ ದುವಾ ಮಾಡಲಾಗುವುದು, ಪ್ರತಿಯೊಬ್ಬ ನಿವಾಸಿಗಳು ಸಂತೋಷವಾಗಿರಬೇಕು, ಸಮೃದ್ಧವಾಗಿರಬೇಕು ಎಂಬುದು ಸೂಫಿ ಸಂತರ ತತ್ವ, ಈ ತತ್ವ ಪಾಲಿಸಿ ಜೀವನದಲ್ಲಿ ಮುನ್ನಡೆಯೋಣ ಎಂದರು.


