ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರ ಪಾತ್ರ ಬಹಳ ಮಹತ್ವದ್ದಾಗಿದೆ. ಚಿಕ್ಕ ಮಕ್ಕಳು ಪರಿಪೂರ್ಣತೆ ಹೊಂದಲು ಮನೆಯ ಹಿರಿಯರ ಅನುಭವದ ನುಡಿ ಕಿರಿಯರಿಗೆ ಅಮೃತವಿದ್ದಂತೆ, ಕಿರಿಯರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಮನೆಯ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆ ಅತಿ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕುಟುಂಬಕ್ಕೆ ಭದ್ರ ಬುನಾದಿಯಾಗಿರುವ ಹಿರಿಯ ನಾಗರಿಕರ ಉಪಸ್ಥಿತಿ ಅವಶ್ಯಕವಾಗಿದೆ. ಎಳವೆಯಲ್ಲಿಅಜ್ಜ-ಅಜ್ಜಿ ಹತ್ತಿರ ಬೆಳೆಯುವುದರಿಂದ ಮಕ್ಕಳು ಸುಸಂಸ್ಕೃತರಾಗಿ ಜೀವನ ಸುಂದರಗೊಳ್ಳುತ್ತದೆ. ಮನೆಯ ಹಿರಿಯರು ಕಿರಿಯರಿಗೆ ಸದಾ ಮಾದರಿಯಾಗಿರುತ್ತಾರೆ ಎಂದು ಅವರು ಹೇಳಿದರು.
ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್.ಬಸವರೆಡ್ಡಿ ಅವರು ಉಪನ್ಯಾಸ ನೀಡಿದರು.
ಹಿರಿಯ ನಾಗರೀಕರ ಸಬಲೀಕರಣ ವಿಷಯದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ ಚವ್ಹಾಣ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಜಗದೀಶ ಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶರಾದ ರಾಜಶೇಖರ ದೈವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

