ದೇವರಹಿಪ್ಪರಗಿ ಬಳಿ ಸಂಭವಿಸಿದ ಬಸ್ ಹಾಗೂ ಲಾರಿ ಅಪಘಾತ | ಅಪಘಾತದಲ್ಲಿ ಮೃತಪಟ್ಟ ಬಳಗಾನೂರಿನ ಬಾಲಕ | ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದ ಶಾಸಕ ಅಶೋಕ ಮನಗೂಳಿ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚಲಿಸುತ್ತಿದ್ದ ಲಾರಿಯ ಹಿಂಬದಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟು, ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಸಿಂದಗಿ ರಸ್ತೆಯಲ್ಲಿನ ರಾಜಸ್ಥಾನಿ ಡಾಭಾ ಹತ್ತಿರ ಶುಕ್ರವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.
ಕಲಬುರ್ಗಿಗೆ ತೆರಳುತ್ತಿದ್ದ ಚಿಕ್ಕೋಡಿ-ಕಲಬುರ್ಗಿ(ಕೆಎ ೨೮ ಎಫ್ ೨೩೬೯) ಸಾರಿಗೆ ಬಸ್ ಮುಂದೆ ಚಲಿಸುತ್ತಿದ್ದ ಲಾರಿಗೆ(ಎಮ್‌ಎಚ್-೧೩ ಎಎಕ್ಸ ೩೫೬೫) ಗುದ್ದಿದ ಪರಿಣಾಮ ಬಸ್‌ನಲ್ಲಿ ಚಲಿಸುತ್ತಿದ್ದ ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.
ಅದೇ ಸಮಯದಲ್ಲಿ ಹೆದ್ದಾರಿ ಮೂಲಕ ತೆರಳುತ್ತಿದ್ದ ಸಿಂದಗಿ ಶಾಸಕ ಅಶೋಕ ಮನಗೂಳಿ ಅಪಘಾತ ಸ್ಥಳದಲ್ಲಿದ್ದು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳಗಳನ್ನು ಸಿಂದಗಿ, ರೋಗಿಗಳಿಗೆ ಧೈರ್ಯ ತುಂಬಿದರಲ್ಲದೆ, ದೇವರಹಿಪ್ಪರಗಿ ಹಾಗೂ ವಿಜಯಪುರ ಆಸ್ಪತ್ರೆಗಳಿಗೆ ಸಾಗಿಸಿ ಮಾನವೀಯತೆ ಮೆರೆದರು.
ಗಾಯಾಗೊಂಡವರಲ್ಲಿ ೧೦ ವರ್ಷದ ಬಾಲಕ ಸಿಂದಗಿ ತಾಲ್ಲೂಕು ಬಳಗಾನೂರ ಗ್ರಾಮದ ಕೇದಾರ ಪರಶುರಾಮ ಮಾಲದ ಆಸ್ಪತ್ರೆಯಲ್ಲಿ ಮೃತಪಟ್ಟರೇ, ಬಸ್ ಚಾಲಕ ಇಂಚಗೇರಿಯ ಧರೆಪ್ಪ ಏಳಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಸ್ ಲಾರಿ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ದೇವರ ಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್‌ಐ ಸಚೀನ ಆಲಮೇಲಕರ ನೇತೃತ್ವದ ಪೊಲೀಸ್ ಸಿಬ್ಬಂದಿ ರಾತ್ರಿ ೧೧ ಗಂಟೆಯವರೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ತಡೆದು ಸಂಚಾರ ಸುಗಮಗೊಳಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು.


