ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾತ್ಮಾ ಗಾಂಧೀಜಿ ಮತ್ತು ಲಾಲಬಹಾದ್ದೂರ ಶಾಸ್ತ್ರಿ ಅವರ ಆದರ್ಶಗಳು ಭಾರತೀಯರ ನೈತಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕತ್ವಕ್ಕೆ ಸ್ಪೂರ್ತಿಯಾಗಿವೆ. ಅವರ ತತ್ವಾದರ್ಶಗಳು ವಿಶ್ವಮಾನ್ಯವಾಗಿದ್ದು, ಅವುಗಳ ಪಾಲನೆ ಇಂದಿನ ಪೀಳಿಗೆಗೆ ಪ್ರಸ್ತುತವಾಗಿವೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ-ಲಾಲಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಅಹಿಂಸೆಯ ಮೂಲಕ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಶಾಂತಿಯ ದೂತ. ಗಾಂಧೀಜಿಯವರ ತತ್ವಾದರ್ಶಗಳು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ದೇಶಕ್ಕೆ ದಾರಿದೀಪವಾಗಿಬೇಕೆಂದು ಹೇಳಿದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ ಸತ್ಯ, ಅಹಿಂಸೆ, ಸರಳತೆ, ರಾಷ್ಟ್ರೀಯತೆ, ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆಯಂತಹ ಆದರ್ಶಗಳು ಇಂದಿನ ಯುವ ಜನಾಂಗದ ಬದುಕನ್ನು ರೂಪಿಸುತ್ತವೆ.ಗಾಂಧೀಜಿಯವರು ಸರಳ ಜೀವನ ಮತ್ತು ಉನ್ನತ ಚಿಂತನೆಗಳನ್ನು ನಂಬಿದ್ದರು ಎಂದು ಹೇಳಿದರು.
ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಆದಿಗೊಂಡೆ,ಎಚ್ ಜೆ ಲೋಣಿ, ಜಯಶ್ರೀ ಗೋಟ್ಯಾಳ ಹಾಗೂ ಅಡುಗೆ ಸಹೋದರಿಯರು, ಮಕ್ಕಳು ಉಪಸ್ಥಿತರಿದ್ದರು.

