ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ನಡೆಸಕೂಡದು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದಾಗ ಹಾಗೂ ಮಾಧ್ಯಮ ಗೋಷ್ಠಿ ಸಂದರ್ಭದಲ್ಲಿ ಹೋರಾಟಗಾರರನ್ನು ಹಗುರವಾಗಿ ಮಾತನಾಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಹೋರಾಟಗಾರರು ಆಪಾದಿಸಿದ್ದಾರೆ.
ಧರಣಿ ಕುಳಿತವರು ಶೇ. ೯೦ ರಷ್ಟು ನಿರಪರಾದಿಗಳು ಉಳಿದ ೧೦% ರಷ್ಟು ಯಾರದೋ ಕುಮ್ಮಕ್ಕಿನಿಂದ ಧರಣಿ ನಡೆಸುತ್ತಿದ್ದಾರೆಂದು ಸಚಿವರು ಹೇಳಿಕೆ ನೀಡಿದ್ದಾರೆ. ಧರಣಿ ಕುಳಿತವರು ಯಾವ ಕಾರಣಕ್ಕಾಗಿ ಕುಳಿತಿದ್ದಾರೆ. ಅವರ ನಿಲುವೇನು? ಯಾರಿಗಾಗಿ ಧರಣಿ ಕುಳಿತಿದ್ದಾರೆ ಮತ್ತು ಏತಕ್ಕಾಗಿ ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದುಕೊಳ್ಳದೆ ಅಧಿಕಾರದ ದರ್ಪದಿಂದ ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡಿರುವುದು ತಮ್ಮ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಧರಣಿ ಕುಳಿತವರು ಯಾರು ಅಜ್ಞಾನಿಗಳಿಲ್ಲ. ಎಲ್ಲರೂ ಉನ್ನತ ಶಿಕ್ಷಣ ಅಧ್ಯಯನ ಮಾಡಿದಂತವರು ಇಲ್ಲಿ ಯಾರದೂ ಸ್ವಾರ್ಥವಿಲ್ಲ. ಮತ್ತೊಬ್ಬರಿಂದ ಪ್ರಚೋದನೆಗೆ ಒಳಗಾಗಿ ಅಥವಾ ಯಾರ ಕುಮ್ಮಕ್ಕೂ ಇದರಲ್ಲಿ ಇಲ್ಲ. ಇಂತಹದರಲ್ಲಿ ಹೋರಾಟಗಾರರಿಗೆ ಸಚಿವರು ಅಗೌರವವಾಗಿ ಮಾತನಾಡಿ ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಕುಮ್ಮಕ್ಕು ಎಂದು ಹೇಳಿದ್ದಾರೆ. ಯಾರ ಕುಮ್ಮಕ್ಕಿನಿಂದ ಹೋರಾಟ ನಡೆಯುತ್ತಿದೆ ಎಂಬುವುದನ್ನು ಬಹಿರಂಗ ಪಡಿಸಲಿ. ಇಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿ ಹೋರಾಟದಲ್ಲಿ ಇಲ್ಲ. ತಮ್ಮ ಸ್ವಾರ್ಥಕ್ಕೊಸ್ಕರ ಬಡ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲು ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಉದ್ದೇಶಿಸಿದೆ. ಇದನ್ನು ಖಂಡಿಸಿ ನಾವು ಹೋರಾಟ ನಡೆಸುತ್ತಿದ್ದರೆ ಹೋರಾಟಗಾರರಿಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಈ ಮಾತನ್ನು ಹಿಂಪಡೆದು ಹೋರಾಟಗಾರರಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಹಾಗೂ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಜಂಟಿಯಾಗಿ ಎಚ್ಚರಿಕೆ ನೀಡಿದ್ದಾರೆ.

