ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯ ದಶಮಿಯ ದಿನದಂದು ವಿಶೇಷವಾಗಿ ಜನರು ಬನ್ನಿ ಮರವನ್ನು ಪೂಜಿಸಿ, ಬನ್ನಿ ಎಲೆಗಳನ್ನು ಚಿನ್ನದಂತೆ ಒಬ್ಬರಿಗೊಬ್ಬರೂ ಪರಸ್ಪರ ಹಂಚಿಕೊಂಡು ಪ್ರೀತಿ, ಸ್ನೇಹ, ಬಾಂಧವ್ಯ ಮತ್ತು ಸಹೋದರತೆಯ ಭಾವದೊಂದಿಗೆ ಕಿರಿಯರು ಹಿರಿಯರಿಗೆ ನೀಡುತ್ತಾರೆ. ಇದರಿಂದ ಸಮಾಜದಲ್ಲಿ ಬಾಂಧವ್ಯ ಮತ್ತು ಸೌಹಾರ್ಧತೆಯು ಹೆಚ್ಚಾಗುತ್ತದೆ ಎಂದು ಶಿಕ್ಷಕಿ ಮಂಜುಳಾ ಜೋಶಿ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಹನುಮಾನ ದೇವಸ್ಥಾನದಲ್ಲಿ ಅ.೨ ವಿಜಯ ದಶಮಿ ದಿನದಂದು ಜರುಗಿದ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡಿ, ಈ ವಿಜಯ ದಶಮಿ ಆಚರಣೆಯು ಪಾಂಡವರು ತಮ್ಮ ಶಸ್ತಾçಸ್ತçಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟು, ವಿಜಯ ದಶಮಿಯ ದಿನದಂದು ಅವುಗಳನ್ನು ತೆಗೆದುಕೊಂಡು ಯುದ್ಧದಲ್ಲಿ ಗೆದ್ದ ಕಥೆಯನ್ನು ಸ್ಮರಿಸುವ ಸುದಿನವಾಗಿದೆ. ಪ್ರೀತಿಯಿಂದ ಕೂಡಿದ ಉಡುಗೊರೆಯನ್ನು ಸಂಕೇತಿಸುವ ಹಬ್ಬವೇ ಇದಾಗಿದೆ. ನಗರ ಪ್ರದೇಶಗಳಲ್ಲಿ ನೆರೆಮನೆಯವರು ಯಾರು ಎಂಬುದೇ ಗೊತ್ತಿಲ್ಲದಿರುವ ಇಂತಹ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಎಲ್ಲರೂ ಸೇರಿ ಬನ್ನಿ ವಿನಿಮಯ ಮಾಡಿಕೊಳ್ಳುವ ಈ ಕಾರ್ಯಕ್ರಮವು ನಮ್ಮೆಲ್ಲರನ್ನು ಒಂದುಗೂಡಿಸಲು ಮತ್ತು ಸಮಾಜದಲ್ಲಿ ಐಕ್ಯತೆ, ಸಮಗ್ರತೆ ಮತ್ತು ಭಾವೈಕ್ಯತೆ ಬೆಳೆಸುವಲ್ಲಿ ಮಹತ್ವದ್ದಾಗಿದೆ. ನಮ್ಮಲ್ಲಿರುವ ಮೇಲು-ಕೀಳುಗಳೆಂಬ ಭಾವವನ್ನು ತೊರೆದು ಪರಸ್ಪರ ಬನ್ನಿ ಕೊಟ್ಟು ತೆಗೆದುಕೊಂಡು ನಾವೆಲ್ಲರೂ ಒಂದು ಮತ್ತು ವಸುದೈವ ಕುಟುಂಬಕಂ ಎಂಬ ಸದ್ಭಾವದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ಈ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಪ್ರೊ. ಎಂ.ಎಸ್.ಖೊದ್ನಾಪೂರ, ನಾನಾಸಾಬ ಕೂಟನೂರ, ಬಾಬು ಕೋಲಕಾರ, ಎಸ್.ಬಿ.ಬಶೆಟ್ಟಿ, ಎಸ್.ಎಂ.ಮಠಪತಿ ಹಾಗೂ ಮಹಿಳಾ ಬಳಗ ಸದಸ್ಯರಾದ ಶೀಲಾ ದೇವನಾಯಕ, ಗೀತಾ ಹುಲ್ಲೂರ, ಅಂಬಿಕಾ ರಜಪೂತ, ಲಲಿತಾ ರಜಪೂತ, ಭಾರತಿ ಬಿರಾದಾರ, ಸವಿತಾ ಪಾಟೀಲ, ಸಿದ್ದಮ್ಮ ಪಾಟೀಲ, ಸವಿತಾ ಕುಮಟಗಿ, ಕಾವ್ಯಾ ಸಂಬಣ್ಣಿ, ಮಾಯಕ್ಕ ಸಂಖ, ವಿದ್ಯಾ ಮಠಪತಿ, ಶಶಿಕಲಾ ಉಕುಮನಾಳ, ರೇವತಿ ಬುದ್ನಿ, ಅನ್ನಪೂರ್ಣ ಪಾಟೀಲ, ಸುರೇಖಾ ಅಂಗಡಿ, ವಿಜಯಲಕ್ಷ್ಮಿ ಬಾರಿಗಿಡದ ಇನ್ನಿತರರು ಸೇರಿದಂತೆ ಸುತ್ತಮುತ್ತಲಿನ ಕಾಲನಿಗಳ ನೂರಾರು ಮಹಿಳೆಯರು, ಹಿರಿಯರು, ಯುವಕರು ಮತ್ತು ಮಕ್ಕಳು ಪರಸ್ಪರ ಬನ್ನಿ ನೀಡಿ ಬದುಕು ಬಂಗಾರವಾಗಲೆಂದು ಹಾರೈಸಿದರು.

