ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ನಾಡಿನಲ್ಲಿ ಎಲ್ಲರೂ ರೈತರನ್ನು ಬಡೆದು ತಿನ್ನುತ್ತಿದ್ದಾರೆ, ಚುನಾವಣಾ ಸಂದರ್ಭದಲ್ಲಿ ನಾನು ರೈತರ ಮಗ ಎಂದು ಮತ ಪಡೆದು ಆರೆಸಿ ಬಂದು ನಂತರ ಹಣ ಮಾಡುವುದು ಅಷ್ಟೇ ಮೂಲ ಉದ್ದೇಶವಿಟ್ಟು ರೈತರನ್ನು ಸುಲಿಗೆ ಮಾಡುವುದು ನಮ್ಮ ಚುನಾಯಿತ ಪ್ರತಿನಿಧಿಗಳ ಕೆಲಸವಾಗಿದೆ, ಆದ್ದರಿಂದ ರೈತರೆಲ್ಲರು ಜಾತಿ, ಮತ, ಪಕ್ಷ, ಬಡವ, ಶ್ರೀಮಂತ ಎನ್ನುವ ಬೇಧಬಾವ ಮಾಡದೇ ಒಂದಾಗಬೇಕು ಅಂದಾಗ ಮಾತ್ರ ರೈತ ಆತ್ಮಹತ್ಯೆಯನ್ನು ತಡೆಯಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಹೇಳಿದರು.
ವಿಜಯಪುರ ತಾಲೂಕಿನ ಆಹೇರಿ ತಾಂಡಾ ನಂಬರ ೧ ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚುನ್ನಪ್ಪಾ ಪೂಜೇರಿ ಬಣದ ಗ್ರಾಮಘಟಕ ಉದ್ಘಾಟನೆ, ಶಾಲು ದೀಕ್ಷೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ ಆಲಿಮಟ್ಟಿ ಜಲಾಶಯಕ್ಕೆ, ಕುಡಗಿ-ಎನ್.ಟಿ.ಪಿ.ಸಿ, ಮುಳವಾಡ ಕೈಗಾರಿಕಾ ಪ್ರದೇಶಕ್ಕೆ, ಸಾವಿರಾರು ವಿಂಡ್ ಪ್ಯಾನ್, ಸಾವಿರಾರು ಎಕರೆ ಸೋಲಾರ ವಿದ್ಯುತ್ ಘಟಕ, ಸೇರಿದಂತೆ ೨೦ ಕ್ಕೂ ಅಧಿಕ ಏತನೀರಾವರಿ ಕಾಲುವೆಗಳಿಗೆ ಹಾಗೂ ವಿಮಾನ ನಿಲ್ದಾಣಕ್ಕೆ, ವೈನ್ ಪಾರ್ಕಗೆ, ಪುಡ್ ಪಾರ್ಕ ಸೇರಿದಂತೆ ಇನ್ನು ಹಲವಾರು ಯೋಜನೆಗಳಿಗೆ ಲಕ್ಷಾಂತರ ಎಕರೆ ಫಲವತ್ತಾದ ಕೃಷಿ ಭೂಮಿ ಕಳೆದುಕೊಂಡು ನಮ್ಮ ಪೂರ್ವಿಕರ ಸಮಾಧಿ, ಮಠ ಮಾನ್ಯಗಳು ಹಾಗೂ ನಮ್ಮ ಮನೆಗಳನ್ನು ಕಳೆದುಕೊಂಡಿದ್ದೇವೆ, ಮುಂದೆ ಒಂದು ಎಕರೆ ಭೂಮಿ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ, ಆದ್ದರಿಂದ ಯಾವ ರೈತರು ಭೂಮಿ ಮಾರಿಕೊಳ್ಳಬೇಡಿ, ಎಲ್ಲರೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಉಪಯೋಗ ಪಡೆದುಕೊಂಡು ಕಡಿಮೆ ಭೂಮಿಯಲ್ಲಿ ಹೆಚ್ಚು ಆದಾಯ ಪಡೆಯುವುದರ ಜೊತೆಗೆ ಸಂಘಟಿತರಾಗಿ ಸಮಗ್ರ ಕೃಷಿ ಮಾಡಿ ರೈತರೆಲ್ಲರೂ ಶ್ರೀಮಂತರಾಗಬೇಕು ಇದಕ್ಕಾಗಿ ರೈತ ಸಂಘ ನಿರಂತರ ಪ್ರಯತ್ನ ಮಾಡುತ್ತಾ ಹಲವಾರು ಕಾರ್ಯಾಗಾರ ತರಬೇತಿ ಹಮ್ಮಿಕೊಂಡು ರೈತರನ್ನು ಜಾಗೃತ ಮಾಡುತ್ತಿದ್ದೇವೆ. ಇದರ ಲಾಭವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಂಜು ಮಹಾರಾಜರು ಆಶಿರ್ವಚನ ನೀಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಕಾರ್ಯಾಧ್ಯಕ್ಷ ಪ್ರಕಾಶ ತೇಲಿ, ತಾಲೂಕಾ ಅಧ್ಯಕ್ಷ ಅನಮೇಶ ಜಮಖಂಡಿ, ತಾಲೂಕಾ ಉಪಾಧ್ಯಕ್ಷರಾದ ಬಸಗೊಂಡಪ್ಪ ತೇಲಿ, ನಾಗಠಾಣ ಹೋಬಳಿ ಅದ್ಯಕ್ಷರಾದ ರಾಮಸಿಂಗ ರಜಪೂತ, ಆಹೇರಿ ಗ್ರಾಮ ಘಟಕದ ಅಧ್ಯಕ್ಷ ಶಂಕರಗೌಡ ಬಿರಾದಾರ, ಮಾತನಾಡಿದರು.
ಈ ವೇಳೆ ೭೦ ಕ್ಕೂ ಅಧಿಕ ನೂತನ ರೈತ ಸಂಘದ ಪದಾಧಿಕಾರಿಗಳಿಗೆ ಶಾಲುದೀಕ್ಷೆ ಮಾಡಿ ಗುರುತಿನ ಚೀಟಿ ವಿತರಣೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯೇಸು ಪೂಜಾರಿ, ತಿಪ್ಪಣ್ಣ ನಾಟಿಕಾರ, ಬಸವರಾಜ ಮಸೂತಿ, ತಿಪ್ಪರಾಯ ಬೈರೊಡಗಿ, ಆತ್ಮಾನಂದ ಬೈರೋಡಗಿ, ಶೆಟ್ಟು ಜಾಧವ, ರಾಜಕುಮಾರ ಜಾಧವ, ಬಾವುಸಿಂಗ ಜಾಧವ, ರಾಜು ಜಾಧವ, ರವಿ ರಾಠೋಡ, ಗಣೇಶ ಜಾಧವ, ಅನೀಲ ಜಾಧವ, ಅಶೋಕ ಜಾಧವ, ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಗೂ ಅನೆಕ ರೈತರು ಉಪಸ್ಥಿತರಿದ್ದರು.

