ಮರಣವೇ ಮಹಾನವಮಿ ಕಾರ್ಯಕ್ರಮ | ಡಾ.ತೋಂಟದ ಸಿದ್ದಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೆ | ಡಾ:ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರ ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ಉದಯರಶ್ಮಿ ದಿನಪತ್ರಿಕೆ
ವರದಿ: ಗುಲಾಬಚಂದ ಜಾಧವ
ಗದಗ: ಪ್ರತಿಷ್ಠಿತ ಮಠಮಾನ್ಯಗಳೊಲ್ಲೊಂದಾದ ಗದಗಿನ ತೋಂಟದಾರ್ಯ ಮಠದ ವತಿಯಿಂದ ಕೊಡಮಾಡುವ ಪ್ರಸಕ್ತ ಸಾಲಿನ “ಡಾ,ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2025” ಈ ಬಾರಿ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.
ಅ,3 ರಂದು ಶುಕ್ರವಾರ ಮುಂಜಾನೆ 10-30 ಗಂಟೆಗೆ ಗದಗಿನ ತೋಂಟದಾರ್ಯ ಮಠದ ಆವರಣದಲ್ಲಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 7 ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 2025 ಹಾಗೂ ಗ್ರಂಥ ಬಿಡುಗಡೆ ಸಮಾರಂಭ ಡಾ.ತೋಂಟದ ಸಿದ್ದರಾಮ ಶ್ರೀಗಳವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ ಎಸ್. ಎಸ್.ಪಟ್ಟಣಶೆಟ್ಟರ ತಿಳಿಸಿದ್ದಾರೆ.
2018 ರಿಂದ ತೋಂಟದ ಡಾ.ಸಿದ್ದಲಿಂಗ ಶ್ರೀಗಳವರ ಹೆಸರಿನಲ್ಲಿ ಅಪಾರ ಶಿಷ್ಯಂದಿರ ಬಳಗ ಸ್ಥಾಪಿಸಿರುವ ತೋಂಟದ ಸಿದ್ದಲಿಂಗ ಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ, ಖ್ಯಾತ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ಪ್ರಧಾನ ಮಾಡಲಾಗುತ್ತಿದೆ. ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ.ಎಂ.ಎಂ.ಕಲಬುರ್ಗಿ ಅವರ ಪತ್ನಿ ಶ್ರೀಮತಿ ಉಮಾದೇವಿ ಕಲಬುರ್ಗಿ ಅವರು ಪ್ರಶಸ್ತಿ ಸ್ವೀಕರಿಸುವರು ಎಂದು ತಿಳಿಸಿದರು.
ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಟಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಕೃತಜ್ಞತಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾನೂನು ಸಂಸದೀಯ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ, ಮಾಜಿ ಮುಖ್ಯ ಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ.ಪಾಟೀಲ, ಜಿ.ಎಸ್.ಪಾಟೀಲ, ಡಾ.ಚಂದ್ರು ಲಮಾಣಿ, ವಿಪ ಸದಸ್ಯರಾದ ಎಸ್.ವಿ.ಸಂಕನೂರ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಶ್ರೀಮತಿ ಡಾ. ಮಲ್ಲಿಕಾ ಘಂಟಿ, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮೊದಲಾದ ಗಣ್ಯರು ಆಗಮಿಸಲಿದ್ದಾರೆ.
ಸಮಾರಂಭದ ಸಮ್ಮುಖವನ್ನು ಮುಂಡರಗಿ- ಬೈಲೂರು ತೋಂಟದಾರ್ಯ ಶಾಖಾಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಶಿರೋಳ-ಬೈರನಹಟ್ಟಿ ತೋಂಟದಾರ್ಯ ಶಾಖಾಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಅರಸೀಕೆರೆ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಸಿಕೇಂದ್ರ ಮಹಾಸ್ವಾಮಿಗಳು, ಸಂಡೂರು ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಆಳಂದ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಶ್ರೀ ಕೋರಣೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ತೋಂಟದ ಡಾ ಸಿದ್ದರಾಮ ಶ್ರೀಗಳವರು ಕನ್ನಡಕ್ಕೆ ಅನುವಾದಿಸಿದ ತೌಲನಿಕ ಧರ್ಮದರ್ಶನ ಗ್ರಂಥ ಬಿಡುಗಡೆಯಾಗಲಿದೆ ಎಂದರು
2020 ರಲ್ಲಿ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಬೆಂಗಳೂರಿನ ಶ್ರೀ ಬಸವ ಟಿ.ವ್ಹಿ. ಅವರಿಗೆ ನೀಡಲಾಗಿದ್ದು 2021 ರಲ್ಲಿ ಬೆಂಗಳೂರಿನ ಜಸ್ಟಿಸ್ ಶ್ರೀ ನಾಗಮೋಹನದಾಸ ಅವರಿಗೆ ನೀಡಲಾಗಿದೆ. 2022 ರಲ್ಲಿ ಭಾಲ್ಕಿಯ ಡಾ.ಬಸವಲಿಂಗ ಮಹಾಸ್ವಾಮಿಗಳು, 2023 ರಲ್ಲಿ ಬೆಳಗಾವಿಯ ಡಾ.ಎಸ್.ಎಂ.ಜಾಮದಾರ, ಕಳೆದ 2024 ರಲ್ಲಿ ಬೆಂಗಳೂರಿನ ಶರಣ ಸಾಹಿತಿಗಳಾದ ನಾಡೋಜ ಗೊ.ರು.ಚನ್ನಬಸಪ್ಪ ಅವರುಗಳು ಪ್ರಶಸ್ತಿ ಪುರಸ್ಕೃತರಾಗಿ ತೋಂಟದ ಸಿದ್ದಲಿಂಗ ಶ್ರೀಗಳವರ ರಾಷ್ಟ್ರೀಯ ಪ್ರಶಸ್ತಿಯ ಮೌಲ್ಯಯುತ ಘನತೆ,ಗೌರವ ಹೆಚ್ಚಿಸಿದ್ದಾರೆ. ವೈಚಾರಿಕ ಸೆಲೆಯ ತೋಂಟದ ಸಿದ್ದಲಿಂಗ ಶ್ರೀಗಳವರ ಪ್ರಶಸ್ತಿಯನ್ನು ಈ ಬಾರಿ ವೈಚಾರಿಕ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ ಎಂದು ಪ್ರೊ, ಎಸ್.ಎಸ್. ಪಟ್ಟಣಶೆಟ್ಟರ ತಿಳಿಸಿದರು.
ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ, ಧನೇಶ ದೇಸಾಯಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕೆ.ಎಸ್.ಚೆಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ, ತನ್ನಯ್ಯ ಹಿರೇಮಠ ಇತರರಿದ್ದರು.

“ಸಾತ್ವಿಕತೆ ಹೃದಯದ ಲಿಂಗೈಕ್ಯ ತೋಂಟದ ಡಾ. ಸಿದ್ದಲಿಂಗ ಪೂಜ್ಯರು ಅಪರೂಪ ಕಾವಿಧಾರಿ ಸ್ವಾಮೀಜಿಯವರು. ತೋಂಟದಾರ್ಯ ಮಠದ ಆಸ್ಮಿತೆ ನವ್ಯತೆಯಿಂದ ಬರೆದಿದ್ದಾರೆ. ಸಮಾಜದ ಹೂರಣರಾಗಿ ಮಿನುಗಿದ್ದಾರೆ. ಸಮಾಜಮುಖಿ ಚಿಂಚನೆ ಮಹೋನ್ನತವಾಗಿವೆ.ಧಾಮಿ೯ಕ ಶ್ರದ್ಧೆ, ಶೈಕ್ಷಣಿಕ ಭಾವ, ವೈಚಾರಿಕ ನೆರಳು ಕುತೂಹಲಕಾರಿವೆ. ಕೋಮು ಸೌಹಾರ್ದತೆಯ ಸಾಮರಸ್ಯ ಮಿಡಿತ ಪೂಜ್ಯರ ಮನಾಂಗಳದಲ್ಲಿ ಸದಾ ಸತ್ಯಾನ್ವೇಷಣೆ ತಳಹದಿಯ ತುಡಿತದಲ್ಲಿ ಹೊರಳಿವೆ. ಅಪ್ಪಟ ಕನ್ನಡ ಸ್ವಾಮಿಗಳಾಗಿ ಜನಮನದಲ್ಲಿ ಜನಾನುರಾಗಿರುವ ಡಾ.ಸಿದ್ದಲಿಂಗ ಶ್ರೀಗಳ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ವೈಚಾರಿಕ ನಿಲುವಿನ ಸಂಶೋಧಕ ಸಾಹಿತಿ, ಡಾ ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವುದು ನಿಜವಾಗಿಯೂ ಪ್ರಶಸ್ತಿ ಮೌಲ್ಯ ಇನ್ನಷ್ಟು ಪವಿತ್ರತೆಗೊಳಿಸಿದಂತಾಗಿದೆ. ಮೌಲಿಕ ಮೀಮಾಂಸೆಯ “ತೋಂಟದ ಡಾ.ಸಿದ್ದಲಿಂಗ ಶ್ರೀಗಳ ಹಾಗೂ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ” ಎರಡು ಜೀವಗಳು ಜ್ಞಾನ-ಸತ್ಯದ ಅನ್ವೇಷಣೆಗಳಾಗಿವೆ. ವಿಜಯಪುರ ಜಿಲ್ಲೆಯ ಈ ನಭೋತಿ ಅನ್ವೇಷಕರ ಸಮಾಗಮ ಈ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಗಲಿದೆ. ಈ ಜೀವಗಳ ಜೀವಿತದ ಪ್ರತಿಕ್ಷಣವೂ ಸಮಾಜ ಸವಿಸೆಳೆತಕ್ಕೆ ಮೀಸಲಾಗಿದ್ದು ಅವಿಸ್ಮರಣೀಯ. ಎಂದೂ ಮರೆಯಲಾಗದು. ಎಲ್ಲರಂಥಲ್ಲ ಈ ವೈಚಾರಿಕ ಜೀವ ಚೈತ್ರಗಳು.”
– ಪ್ರೊ ಎಸ್.ಎಸ್.ಪಟ್ಟಣಶೆಟ್ಟರ
ಕಾರ್ಯದರ್ಶಿಗಳು.
ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಗದಗ ಹಾಗೂ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್, ಆಲಮಟ್ಟಿ

