ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಿಹಾರ ರಾಜ್ಯದ ಪಾಟ್ನಾ ಹೈಕೋರ್ಟನ ಮುಖ್ಯನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಪವನಕುಮಾರ ಭಜಂತ್ರಿ ಅವರು ಆಯುಧ ಪೂಜಾ ದಿನವಾದ ಬುಧವಾರ ದಿವಸ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ್ದರು.
ಅವರ ಮನೆ ಕುಲದೇವರಾದ ಪಟ್ಟಣದ ಆಂಜನೆಯ ಮಂದಿರಕ್ಕೆ ಆಗಮಿಸಿ ದೇವರಿಗೆ ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿ ಭಕ್ತಿಪೂರ್ವಕವಾದ ನಮನವನ್ನು ಸಲ್ಲಿಸಿದರು.
ಮುಖ್ಯ ನ್ಯಾಯಮೂರ್ತಿಗಳಾದ ಪವನಕುಮಾರ ಭಜಂತ್ರಿಯವರು ಪಟ್ಟಣಕ್ಕೆ ಆಗಮಿಸುತ್ತಾರೆ ಎನ್ನುವ ಸುದ್ದಿ ತಿಳಿದ ದೇವಸ್ಥಾನ ಆಡಳಿತ ಮಂಡಳಿಯವರು ನ್ಯಾಯಮೂರ್ತಿಯವರನ್ನು ತುಂಬುಹೃದಯದಿಂದ ಬರಮಾಡಿಕೊಂಡು ಉನ್ನತ ಹುದ್ದೆಯನ್ನು ಪಡೆದು ಪ್ರಥಮ ಬಾರಿಗೆ ದೇವಾಲಯಕ್ಕೆ ಆಗಮಿಸಿದ್ದಕ್ಕಾಗಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ನಮ್ಮ ಮನೆ ಕುಲ ದೇವರಾದ ಕೊಲ್ಹಾರ ಹನುಮಾನ್ ದೇವರ ದರುಶನ ಪಡೆಯಲು ನಾನು ಮತ್ತು ನಮ್ಮ ಕುಟುಂಬದವರು ವರುಷದಲ್ಲಿ ಒಮ್ಮೆಯಾದರೂ ತಪ್ಪದೆ ಬಂದು ಪೂಜೆಯನ್ನು ಸಲ್ಲಿಸುವ ಪದ್ದತಿಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದು ಅದರಂತೆ ನಾವು ನಡೆದುಕೊಂಡು ಬರುತ್ತಿದ್ದೇವೆ ದೇವಸ್ಥಾನದ ಜೀರ್ಣೋದ್ದಾರಕ್ಕೆ ನಮ್ಮ ಕುಟುಂಬ ಸದಸ್ಯರು ಸೇವೆ ಸಲ್ಲಿಸಲು ಸಿದ್ದರಿದ್ದೇವೆ ಎಂದು ಆಡಳಿತ ಮಂಡಳಿಯವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಆರಾಧ್ಯ ದೇವಸ್ಥಾನವಾದ ದಿಗಂಬರೇಶ್ವರ ದೇವಾಲಯಕ್ಕೆ ತೆರಳಿ ಪವಾಡ ಯೋಗಿ ಕಲ್ಲಪ್ಪಯ್ಯ ಶಿವಯೋಗಿಗಳ ಕತ್ರುಗದ್ದುಗೆಯ ಹಾಗೂ ದೇವರ ದರ್ಶನ ಪಡೆದ ಅವರನ್ನು ಪೀಠಾಧಿಪತಿ ಕಲ್ಲಿನಾಥ ದೇವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಲ್ಲಿನಾಥ ದೇವರು ಜಿ.ಪಂ ಮಾಜಿ ಸದಸ್ಯ ಕಲ್ಲು ಶಂ.ದೇಸಾಯಿ ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ನಾಗಪ್ಪ ಬಾಲಗೊಂಡ ಸಂಗನಬಸಪ್ಪ ಗಾಣಿಗೇರ ಸಂಕಪ್ಪ ಗು ಕಾಖಂಡಕಿ ಮಲ್ಲಿಕಾರ್ಜುನ ಹೂಗಾರ ಹಣಮಂತ ಮುಳವಾಡ ಈರಣ್ಣ ಬಾಗಿ ಇದೇ ಸಮಯದಲ್ಲಿ ಕೊರಮ ಸಮಾಜದ ಮುಖಂಡರಾದ ಪಟ್ಟಣ ಪಂಚಾಯತ ಸದಸ್ಯ ಬಾಬು ಭಜಂತ್ರಿ ಹಾಗೂ ಸುಭಾಸ ಭಜಂತ್ರಿ ನ್ಯಾಯಮೂರ್ತಿಯವರನ್ನು ಗೌರವಿಸಿದರು.

