ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಸಾಗುವ ಮೂಲಕ ಗಾಂಧೀಜಿ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆದರು. ದೇಶದ ಏಕತೆ, ಪರಸ್ಪರ ಸಹೋದರತ್ವ ಮತ್ತು ಸಾಮಾಜಿಕ ಏಕತೆಗಾಗಿ ಅವರು ಶ್ಲಾಘನೀಯ ಕೆಲಸ ಮಾಡಿದರು ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ ಹೇಳಿದರು.
ನಗರದ ಬಂಜಾರಾ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಮಹಾತ್ಮ ಗಾಂಧಿಯವರ ಜೀವನವನ್ನು ಎತ್ತಿ ತೋರಿಸಿದರು ಹಾಗೂ ಅವರು ಪ್ರಾರಂಭಿಸಿದ ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ, ರೌಲಟ್ ಕಾಯ್ದೆಯ ವಿರುದ್ಧ ಸತ್ಯಾಗ್ರಹ, ಚಂಪಾರಣ್ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಚಳುವಳಿಗಳನ್ನು ಸ್ಮರಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್‌ರವರು ಮಾತನಾಡುತ್ತ. ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಗಾಂಧೀಜಿಯವರು ದೇಶಕ್ಕಾಗಿ ಹೋರಾಟ ನಡೆಸಿದರೂ ಅವರ ಮೂಲತತ್ವವು ಅಹಿಂಸೆಯನ್ನು ಉತ್ತೇಜಿಸುವುದಾಗಿತ್ತು. ಗಾಂಧಿ ಅವರು ರಾಜಕಾರಣಿ, ತತ್ವ ಸಿದ್ದಾಂತಗಳಿಂದಲೇ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಟದ ನೇತೃತ್ವ ವಹಿಸಿದ್ದ ಗಾಂಧೀಜಿಯವರ ಹೋರಾಟದ ಹಾದಿಯಲ್ಲಿ ಅವರ ಸಿದ್ದಾಂತಗಳು ಮತ್ತು ಹೋರಾಟಗಳು ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದಲ್ಲಿ ತಿರುವು ನೀಡಿತು. ಹಿಂಗಾಗಿ ಮಹಾತ್ಮ ಗಾಂಧೀಜಿಯವರು ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

