ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹ ಮತ್ತು ತ್ಯಾಗಗಳೆಂಬ ಪಂಚ ಮೂಲ ಮಂತ್ರಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ನಾಯಕರಲ್ಲಿ ಮಹಾತ್ಮಾ ಗಾಂಧೀಜಿಯವರು ಅಗ್ರಗಣ್ಯರಾಗಿದ್ದರು. ಗಾಂಧೀಜಿ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅದ್ಭುತ ಶಕ್ತಿಯಾಗಿದ್ದರು. ದೇಶ, ಕಾಲಗಳನ್ನು ಮೀರಿದ ಅವರು ಇಡೀ ಜಗತ್ತಿಗೆ ದಾರಿದೀಪವಾಗಿದ್ದಾರೆ. ಶಾಂತಿ-ಕ್ರಾಂತಿ ಮತ್ತು ಅಹಿಂಸೆ ಎಂಬ ಅಸ್ತ್ರವನ್ನು ಹಿಡಿದು ಇಡೀ ರಾಷ್ಟçವನ್ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದ್ದರು. ಆದ್ದರಿಂದ ನಾವೆಲ್ಲರೂ ಗಾಂಧೀಜಿಯವರ ಜೀವನ, ಆದರ್ಶ-ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕೆಂದು ಮುಖ್ಯ ಅತಿಥಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಸಲಹೆ ನೀಡಿದರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜರುಗಿದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಗಾಂಧೀಜಿಯವರ ಪ್ರಾಮಾಣಿಕತೆ, ಶಿಸ್ತು, ಸತ್ಯ ನಿಷ್ಠೆ, ಶಾಂತಿ-ಅಹಿಂಸೆ ಮತ್ತು ಸಾಮಾಜಿಕ ಸಮಾನತೆಯಂತಹ ಸದ್ಗುಣಗಳನ್ನು ಗುರುತಿಸಿದ ರವೀಂದ್ರನಾಥ ಟ್ಯಾಗೋರ ಅವರು ಮಹಾತ್ಮಾ ಎಂಬ ಬಿರುದು ನೀಡಿದರು. ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಟದ ಹೊರತಾಗಿಯೂ ನವ ಭಾರತದ ನರ‍್ಮಾಣಕ್ಕಾಗಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ರಾಮರಾಜ್ಯದ ಕನಸು ಕಂಡಿದ್ದರು. ಹಳ್ಳಿಗಳ ಅಭಿವೃದ್ಧಿಯೇ ರಾಷ್ಟ್ರದ ಪ್ರಗತಿಗೆ ತಳಹದಿ, ಸರ್ವೋದಯ ಮತ್ತು ಶಿಕ್ಷಣಕ್ಕಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಭೌತವಿಜ್ಞಾನಿ ಅಲಬರ್ಟ ಐನಸ್ಟೀನ್ ಹೇಳಿರುವಂತೆ, ರಕ್ತ ಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬರು ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದರು ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’ ಎಂದು ಉಲ್ಲೇಖಸಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ನಾವೆಲ್ಲರೂ ನಮ್ಮ ಮುಂದಿನ ಯುವ ಪೀಳಿಗೆಗೆ ಇಂತಹ ಮೇರು ವ್ಯಕ್ತಿತ್ವದ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಆದರ್ಶ, ದೇಶಭಕ್ತಿ, ಸಮರ್ಪಣಾ ಮನೋಭಾವ ಮತ್ತು ವಿಚಾರಧಾರೆಗಳನ್ನು ತಿಳಿಸಿಕೊಟ್ಟು ಅವರನ್ನು ನಾಳಿನ ಭವ್ಯ ಭಾರತದ ಜವಾಬ್ದಾರಿಯುತ ನಾಗರೀಕರನ್ನಾಗಿ ನಿರ್ಮಾಣ ಮಾಡುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು ಮಾತನಾಡುತ್ತಾ, ಶಾಸ್ತ್ರೀಜಿಯವರು ‘ಜೈ ಜವಾನ್ ಜೈ ಕಿಸಾನ್ ‘ ಎಂಬ ಘೋಷವಾಕ್ಯದೊಂದಿಗೆ ಭಾರತವನ್ನು ಕೃಷಿ ಮತ್ತು ರಕ್ಷಣೆಯಲ್ಲಿ ಸದೃಢ ರಾಷ್ಟçವನ್ನಾಗಿಸುವ ಕನಸು ಕಂಡಿದ್ದರು. ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ನೇರ ನುಡಿ, ಸರಳ ಸಜ್ಜನಿಕೆ ಮತ್ತು ಸಹೃದಯದ ಮೇರು ವ್ಯಕ್ತಿತ್ವದ ಲಾಲ ಬಹಾದ್ದೂರ ಶಾಸ್ತ್ರೀಜಿಯವರು ದೇಶ ಕಂಡ ಅಪ್ರತಿಮ ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದಾಗ ಸರಕಾರದಿಂದ ನನಗೆ ನೀಡುವ ವೇತನ ಹೆಚ್ಚಾಗಿದೆ ಅದನ್ನು ಕಡಿಮೆ ಮಾಡಿ ಎಂದು ಸರಕಾರಕ್ಕೆ ಪತ್ರ ಬರೆದ ಏಕೈಕ ಹಾಗೂ ದೇಶ ಕಂಡ ಅತ್ಯಂತ ಪ್ರಾಮಾಣಿಕ ನೇತಾರರ ಆದರ್ಶಗಳು ನಮಗೆಲ್ಲ ದಾರಿದೀಪವಾಗಬೇಕು ಎಂದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಸಂಚಾಲಕ ಡಾ. ಚಂದ್ರಕಾಂತ.ಬಿ ಅವರು ವೇದಿಕೆಯ ಮೇಲಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

