ಲೇಖನ
– ಸಂತೋಷ್ ರಾವ್. ಪೆರ್ಮುಡ
ಪಟ್ರಮೆ ಗ್ರಾಮ & ಅಂಚೆ,
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತು ಬಹುವಾಗಿ ಪ್ರಚಲಿತದಲ್ಲಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾಗಿದ್ದು, ಅದೇ ಮಾತು ಈಗ ‘ಉದ್ಯೋಗಂ ಸರ್ವ ಲಕ್ಷಣಂ’ ಎಂಬಂತಾಗಿ ಉದ್ಯೋಗವಿಲ್ಲದ ವ್ಯಕ್ತಿಗೆ ಬೆಲೆಯೇ ಇಲ್ಲ ಎನ್ನುವ ಸ್ಥಿತಿ ಇದೆ. ಜೊತೆಗೆ ಉದ್ಯೋಗವಿಲ್ಲದ ಮನುಷ್ಯನಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದ್ದು, ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಎಲ್ಲ ವಸ್ತುಗಳ ಬೆಲೆಯೂ ಗಗನಮುಖಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಬೇಕಾಗುವ ಆದಾಯವನ್ನು ಗಳಿಸುವ ಜವಾಬ್ದಾರಿಯನ್ನು ಕೇವಲ ಗಂಡಸು ಮಾತ್ರ ನಿರ್ವಹಿಸಿದರೆ ಸಾಲದಾಗಿದ್ದು, ಹೆಣ್ಣೂ ಕೂಡ ಉದ್ಯೋಗವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ಸುಳ್ಳಲ್ಲ. ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಹಿಳೆಯರು ಸ್ಥಳೀಯವಾಗಿ ಉದ್ಯೋಗವನ್ನು ಮಾಡುತ್ತಿರುವ ಇಂದಿನ ದಿನಗಳಲ್ಲಿ ತಮ್ಮ ತಮ್ಮ ಉದ್ಯೋಗಗಳಲ್ಲಿ ತಾವು ಪೂರ್ತಿಯಾಗಿ ಕಳೆದು ಹೋಗುವವರೇ ಹೆಚ್ಚು. ಇಂತಹ ವ್ಯಕ್ತಿಗಳು ತಮ್ಮ ತಮ್ಮ ಔದ್ಯೋಗಿಕ ಬದುಕಲ್ಲಿ ಯಶಸ್ವೀ ವ್ಯಕ್ತಿಗಳಾದರೂ, ವೈಯಕ್ತಿಕ (ಸಾಂಸಾರಿಕ) ಜೀವನದಲ್ಲಿ ವಿಫಲರಾಗುವ ಸಾಧ್ಯತೆಯೇ ಅಧಿಕ. ವೃತ್ತಿ ಹಾಗೂ ಸಾಂಸಾರಿಕ ಜೀವನಗಳ ಮಧ್ಯೆ ಸಮನ್ವಯತೆಯಂತೂ ಅತ್ಯಂತ ಅಗತ್ಯವಾಗಿ ಬೇಕಾಗಿದ್ದು, ಇಲ್ಲವಾದರೆ ಸಂಸಾರಿಕ ಮತ್ತು ಔದ್ಯೋಗಿಕ ಜೀವನವು ‘ಎತ್ತು ಏರಿಗೆ ಕೋಣ ನೀರಿಗೆ’ ಎಂಬ ಮಾತಿನಂತೆ ಲಯ ಕಳೆದುಕೊಂಡು ಅರ್ಥಹೀನವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಈ ಕೆಳಕಂಡ ಅಂಶಗಳೆಡೆಗೆ ಗಮನಹರಿಸಿದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಹಾಲು ಜೇನಾಗಿಸಬಹುದು.

ಉದ್ಯೋಗಸ್ಥ ಮಹಿಳೆಯು ತನ್ನ ವೈಯಕ್ತಿಕ ಜೀವನದಲ್ಲಿ ಸದಾ ಸಮಸ್ಯೆಯಿಂದಲೇ ಬಳಲುತ್ತಿದ್ದರೆ ಆಕೆ ಮೌಲ್ಯಯುತ ಉದ್ಯೋಗಿಯಾಗಲಾರಳು. ಮಹಿಳೆಯು ಉದ್ಯೋಗಕ್ಕೆ ಎಷ್ಟು ಪ್ರಾಧಾನ್ಯತೆಯನ್ನು ನೀಡುತ್ತಾಳೋ ಅಷ್ಟೇ ಪ್ರಾಧಾನ್ಯತೆಯನ್ನು ತನ್ನ ವೈಯಕ್ತಿಕ ಜೀವನಕ್ಕೂ ನೀಡುವ ಮೂಲಕ ಸಮನ್ವಯತೆಯನ್ನು ಸಾಧಿಸುವಂತಾಗಬೇಕು. ಸಂಸಾರ ಮತ್ತು ಉದ್ಯೋಗ ಎರಡನ್ನೂ ನಿಭಾಯಿಸುವ ಎಲ್ಲಾ ಮಹಿಳೆಯರು ತಮ್ಮ ದೈನಂದಿನ ಬದುಕಿನಲ್ಲಿ ನಿತ್ಯ ತಮ್ಮ ಬಗಲಲ್ಲಿ ಎರಡು ಕಾಲ್ಪನಿಕ ಚೀಲಗಳನ್ನು ಹೊಂದಿರುತ್ತಾರೆ. ಮೊದಲನೆಯದ್ದು ಕಛೇರಿಯ ಸಮಸ್ಯೆಗಳಿಂದ ತುಂಬಿದ ಚೀಲವಾದರೆ ಎರಡನೆಯದ್ದು ಕೌಟುಂಬಿಕ ಸಮಸ್ಯೆಗಳಿಂದ ತುಂಬಿದ ಚೀಲ. ಕಛೇರಿಯಿಂದ ಮಹಿಳೆ ಕುಟುಂಬದ ವಾತಾವರಣಕ್ಕೆ ಬರುತ್ತಿದ್ದಂತೆ ತನ್ನ ಭುಜದಲ್ಲಿರುವ ಕಛೇರಿಯ ಸಮಸ್ಯೆಗಳಿಂದ ತುಂಬಿದ ಚೀಲವನ್ನು ಮನೆಯ ಹೊರಗಡೆಯಿರುವ ಕಾಲ್ಪನಿಕ ಗೂಟದಲ್ಲಿ ತೂಗುಹಾಕಿ ಕೌಟುಂಬಿಕ ಸಮಸ್ಯೆಗಳ ಚೀಲವನ್ನು ಭುಜಕ್ಕೆ ನೇತು ಹಾಕಿಕೊಂಡು ಮನೆಯೊಳಗೆ ಬರಬೇಕು. ಅದೇ ರೀತಿ ಕೌಟುಂಬಿಕ ಬದುಕಿನಿಂದ ಕಛೇರಿಗೆ ಹೊರಡುವಾಗ ಕೌಟುಂಬಿಕ ಸಮಸ್ಯೆಗಳ ಚೀಲವನ್ನು ಕಾಲ್ಪನಿಕ ಗೂಟಕ್ಕೆ ತೂಗುಹಾಕಿ ಕಛೇರಿ ಸಮಸ್ಯೆಗಳ ಚೀಲವನ್ನು ತನ್ನ ಭುಜಕ್ಕೆ ಹಾಕಿಕೊಂಡು ಕಛೇರಿಗೆ ತೆರಳಿದಾಗ ಮಾತ್ರ ಎರಡೂ ಕ್ಷೇತ್ರಗಳಲ್ಲಿ ಸಮನ್ವಯತೆಯನ್ನು ಸಾಧಿಸಬಹುದು. ಆದರಿಂದ ಮಹಿಳೆ ವೃತ್ತಿಯನ್ನು ಕೇವಲ ಹೊಟ್ಟೆ ಪಾಡಿಗಾಗಿ ನಿರ್ವಹಿಸದೇ ಜತೆಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಾಗಬೇಕು.
ಉದ್ಯೋಗಸ್ಥ ಮಹಿಳೆಯ ವೃತ್ತಿ ಮತ್ತು ಕೌಟುಂಬಿಕ ಬದುಕಿನ ಹೊಂದಾಣಿಕೆಗೆ ಸರಳ ಸೂತ್ರಗಳು
ಪ್ರಥಮ ಆದ್ಯತೆಗಳನ್ನು ಗುರುತಿಸಿಕೊಳ್ಳಬೇಕು: ಜೀವನದಲ್ಲಿ ಸಾಧಿಸಲು ಅಂತಿಮ ಗುರಿ ಇದ್ದಂತೆ ಜೀವನದ ಪ್ರಮುಖ ಅಂಶಗಳಾದ ವೈಯುಕ್ತಿಕ ಮತ್ತು ಉದ್ಯೋಗಸ್ಥ ಜೀವನಕ್ಕೆ ಗುರಿಯೊಂದಿರಬೇಕು ಹಾಗೂ ಆ ಗುರಿಯು ಮಹಿಳೆಗೆ ಸಂತೋಷವನ್ನು ನೀಡುವಂತಿರಬೇಕು. ಗುರಿಗೆ ಅಡ್ಡ ಬರುವಂತಹ ಬಾಹ್ಯ ಅಡೆತಡೆಗಳನ್ನು ಮೆಟ್ಟಿ ನಿಂತು ಪ್ರತೀ ಹೆಜ್ಜೆಯಲ್ಲೂ ಗುರಿ ಸಾಧನೆಯ ಮೂಲಕ ತನ್ನ ಪ್ರಥಮ ಆದ್ಯತೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಉದ್ಯೋಗಸ್ಥ ಮಹಿಳೆಯು ಮಾಡುತ್ತಿರಬೇಕು.
ಕೌಟುಂಬಿಕವಾಗಿ ಮತ್ತು ಔದ್ಯೋಗಿಕವಾಗಿ ತಿದ್ದಿಕೊಳ್ಳಿ
ಸಮಸ್ಯೆಗಳು, ಸನ್ನಿವೇಶಗಳು ವಿಭಿನ್ನವಾದಂತೆ ಸಮಸ್ಯೆಗಳೂ ಭಿನ್ನವಾಗುತ್ತಿದ್ದು, ಸಮಸ್ಯೆಯ ಆಳವನ್ನರಿತು ಮುಂದಿನ ಹೆಜ್ಜೆಯನ್ನು ಇಡುವ ವಿವೇಚನೆಯಿರಬೇಕು. ಮಹಿಳೆಯು ಉದ್ಯೋಗ ಮತ್ತು ವೈಯುಕ್ತಿಕ ಬದುಕು ಎರಡನ್ನೂ ನಿಭಾಯಿಸಬೇಕಾದ ಸನ್ನಿವೇಶವೊದಗಿ ಬಂದಾಗ ಮಹಿಳೆಯು ವೈಯುಕ್ತಿಕವಾಗಿ ಮತ್ತು ಔದ್ಯೋಗಿಕವಾಗಿ ಬೆಳೆಸಿಕೊಳ್ಳಬೇಕಾದ ಮತ್ತು ತಿದ್ದಿಕೊಳ್ಳಲೇಬೇಕಾದ ಕೆಲವೊಂದು ಅಂಶಗಳನ್ನು ಪಟ್ಟಿ ಮಾಡಿಕೊಂಡು ತಿದ್ದಿಕೊಳ್ಳಲೇಬೇಕಾದ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯುವ ಮನಸ್ಥಿತಿಯಿರಬೇಕು.
ನಿಯಮಾವಳಿಗಳನ್ನು ಮತ್ತು ಜೀವನ ಮೌಲ್ಯಗಳನ್ನು ಅರಿಯುವುದು ಉತ್ತಮ
ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ನಿಯಮಗಳಿದ್ದು, ಈ ನಿಯಮಾವಳಿಗಳನ್ನು ಅರಿತು ಕರ್ತವ್ಯ ನಿರ್ವಹಿಸಿದಲ್ಲಿ ಉತ್ತಮ ಉದ್ಯೋಗಿಯಾಗಿ ರೂಪುಗೊಳ್ಳುವಲ್ಲಿ ಹೇಗೆ ಸಹಕಾರಿಯಾಗುತ್ತಯೋ ಅದೇ ರೀತಿ ಕುಟುಂಬದ ಮೌಲ್ಯಗಳು ಹಾಗೂ ಕುಟುಂಬವನ್ನು ಸಂತೋಷವಾಗಿಡುವಲ್ಲಿ ಗಮನಿಸಬೇಕಾದ ಮೂಲ ಅಂಶಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡಲ್ಲಿ ಎರಡೂ ವಿಭಾಗಗಳಲ್ಲಿ ಸಮನ್ವಯತೆಯನ್ನು ಸಾಧಿಸಬಹುದು.
ಸಹಕಾರ ಮನೋಭಾವದ ಅಗತ್ಯತೆ
ಔದ್ಯೋಗಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯವಾಗಿದ್ದು, ಅಂತಹ ಸನ್ನಿವೇಶಗಳಲ್ಲಿ ಹೊಂದಾಣಿಕೆಯ ಮನೋಭಾವನೆಯನ್ನು ರೂಢಿಸಿಕೊವುದು ಉತ್ತಮ. ನಾನು ಹೇಳಿದ್ದೇ ನಡೆಯಬೇಕು ಎಂದು ಭಾವನೆ ಒಳ್ಳೆಯದಲ್ಲ. ನಮ್ಮ ಕಷ್ಟ ಕಾಲಕ್ಕೆ ಸಹಕಾರ ನೀಡುವವರು ನಮ್ಮದೇ ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಎಂಬುದನ್ನು ಯಾವತ್ತೂ ಮರೆಯಬಾರದು. ಮನೆಗೆ ಬಂದ ಕೂಡಲೇ ಕಛೇರಿಯ ಸಮಸ್ಯೆಗಳನ್ನೇ ಚಿಂತಿಸುತ್ತಾ ಕೂರುವ ಬದಲು ಗಂಡ, ಅತ್ತೆ ಮಾವ ತಂದೆ ತಾಯಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುತ್ತಾ ಅವರ ಕೆಲಸಗಳಲ್ಲಿ ಸಹಕರಿಸಿದಾಗ ಮನೆಯ ವಾತಾವರಣವೇ ಧನಾತ್ಮಕವಾಗಿ ಬದಲಾಗಿಬಿಡುತ್ತದೆ.
ಮುಕ್ತ ಸಂವಹನ
ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯು ಮೌನವಾಗಿ ಕೆಲಸ ಮಾಡುತ್ತಿರುವ ಬದಲು ಸಹೋದ್ಯೋಗಿ ಮತ್ತು ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂವಹನ ಚಾತುರ್ಯವನ್ನು ಬೆಳೆಸಿಕೊಂಡಲ್ಲಿ ಕಛೇರಿಯಲ್ಲಿ ಉತ್ತಮ ವಾತಾವರಣದೊಂದಿಗೆ ಕರ್ತವ್ಯ ನಿರ್ವಹಿಸಬಹುದು. ಇದರಿಂದ ಹೊಸ ಕೆಲಸಗಳನ್ನು ಕಲಿಯಲು ಹಾಗೂ ಕಛೇರಿಯಲ್ಲಿ ಮೇಲಧಿಕಾರಿಗಳು ನಮ್ಮಲ್ಲಿ ಉತ್ತಮ ಅಭಿಪ್ರಾಯವನ್ನು ಹೊಂದಲು ಸಹಕಾರಿಯಾಗಬಹುದು. ಅದೇ ರೀತಿ ಉದ್ಯೋಗಸ್ಥ ಮಹಿಳೆಯು ಮನೆಯ ಎಲ್ಲಾ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡುತ್ತ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಯಶಸ್ವಿ ಗೃಹಿಣಿಯೂ ಆಗಬಲ್ಲಳು.
ಸಮಸ್ಯೆಗಳ ಪರಿಹಾರ
ವೃತ್ತಿ ಕ್ಷೇತ್ರ ಅಥವಾ ವೈಯಕ್ತಿಕ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳನ್ನು ಮುಕ್ತ ಮಾತುಕತೆಯ ಮೂಲಕ ಧನಾತ್ಮಕವಾಗಿ ಪರಿಹರಿಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕೇ ವಿನಃ ಸಣ್ಣ ಸಣ್ಣ ವಿಚಾರಕ್ಕೂ ಜಗಳವಾಡಬಾರದು. ಕಛೇರಿಯ ಸಮಸ್ಯೆಗಳನ್ನು ತಮ್ಮ ಮೇಲಧಿಕಾರಿಗಳ ಜತೆ, ಸಾಂಸಾರಿಕ ಸಮಸ್ಯೆಗಳನ್ನು ಸಂಬಂಧಪಟ್ಟ ಕುಟುಂಬದ ಸದಸ್ಯರ ಜತೆ ನೇರವಾಗಿ ಚರ್ಚಿಸಿ ಪರಿಹರಿಸಿಕೊಳ್ಳುವ ಕೌಶಲ್ಯವನ್ನು ಉದ್ಯೋಗಸ್ಥ ಮಹಿಳೆಯು ಹೊಂದಿರಬೇಕಾಗುತ್ತದೆ.
ಕಾಲ ಚಕ್ರಕ್ಕನುಗುಣವಾಗಿ ಜ್ಞಾನದ ವೃದ್ಧಿ
ಬದಲಾಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ತಮ್ಮ ಉದ್ಯೋಗದಲ್ಲಿ ಅವಶ್ಯವಿರುವ ಸಾಮಾನ್ಯ ಜ್ಞಾನವನ್ನು ಮತ್ತು ಕಛೇರಿಯ ದೃಷ್ಟಿಕೋನವನ್ನು ಸಮಗ್ರವಾಗಿ ಅರಿತುಕೊಂಡು ಅಲ್ಲಿ ಲಭ್ಯವಿರುವ ತಂತ್ರಜ್ಞಾನಗಳನ್ನು ಗರಿಷ್ಟ ಪ್ರಮಾಣದಲ್ಲಿ ಬಳಕೆ ಮಾಡುವ ಮನೋಭಾವವನ್ನು ಹೊಂದುವುದು ಉತ್ತಮ. ಇದರಿಂದ ಕೆಲಸಗಳನ್ನು ಅತ್ಯಂತ ಸರಳವಾಗಿ ನಿರ್ವಹಿಸಲು ಸಹಕಾರಿಯಾಗುವುದರೊಂದಿಗೆ ಕೆಲಸಕ್ಕೆ ತಗಲುವ ಸಮಯವನ್ನು ಕಡಿತಗೊಳಿಸಿ ಮಹಿಳೆಯ ಔದ್ಯೋಗಿಕ ಮತ್ತು ಕೌಟುಂಬಿಕ ಬದುಕನ್ನು ಸಮತೋಲನ ಮಾಡಲು ಸಹಾಯಕವಾಗಲಿದೆ.
ಸಂಪರ್ಕದಲ್ಲಿರಿ
ಉದ್ಯೋಗದ ಕ್ಷೇತ್ರದಲ್ಲಿದ್ದರೂ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕೌಟುಂಬಿಕ ವಿಚಾರವಾಗಿ ಅಗತ್ಯ ಸಂದರ್ಭದಲ್ಲಿ ಕುಂಟುಂಬದೊಂದಿಗೂ ನಿರಂತರ ಸಂಪರ್ಕದಲ್ಲಿರುವಂತೆ ಕಾಳಜಿ ವಹಿಸುವುಸು ಅತೀ ಅವಶ್ಯಕ. ಇದು ಉದ್ಯೋಗಸ್ಥ ಮಹಿಳೆಯ ಕಾರ್ಯ ವೈಖರಿಯನ್ನು ಹೆಚ್ಚಿಸುವುದರೊಂದಿಗೆ ಕೌಟುಂಬಿಕವಾಗಿಯೂ ಆಕೆಯನ್ನು ಯಶಸ್ವಿಯಾಗಿಸುತ್ತದೆ.
ಸಲಹೆಗಳನ್ನು ಸ್ವೀಕರಿಸುವ ಮನೋಭಾವ
ಉದ್ಯೋಗಸ್ಥ ಮಹಿಳೆಯ ವೈಯಕ್ತಿಕ ಜೀವನ ಅಥವಾ ವೃತ್ತಿ ಜೀವನದ ಕುರಿತು ಸಲಹೆಯನ್ನು ನೀಡುವ ಆಪ್ತರಿರುತ್ತಾರೆ. ಅವರಲ್ಲಿ ಆಪ್ತ ಸಹೋದ್ಯೋಗಿಗಳು ಅಥವಾ ಕುಟುಂಬಸ್ಥರು ಅಥವಾ ನೆಂಟರಿಷ್ಟರು ಯಾರೇ ನೀಡುವ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದರೊಂದಿಗೆ ತನಗೆ ಸರಿಯೆನಿಸುವ ಉತ್ತಮ ಸಲಹೆಗಳನ್ನು ಆಯ್ದು ಅಳವಡಿಸಿಕೊಳ್ಳುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮಾನೋಭಾವ ಅತೀ ಅಗತ್ಯವಾಗಿದೆ.
ಸಮಯ ನಿರ್ವಹಣೆಯ ಅಗತ್ಯತೆ

ಬದುಕಿನ ಪ್ರತಿ ಹಂತದಲ್ಲೂ ಸಮಯವೆಂಬುವುದು ಹಣದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದು, ಮಹಿಳೆಯು ವೃತ್ತಿ ಜೀವನಕ್ಕೆ ಎಷ್ಟು ಸಮಯವನ್ನು ಮೀಸಲಿಡಬೇಕು ಎಂಬ ಸ್ಪಷ್ಟತೆಯನ್ನು ಮತ್ತು ಸಮಯ ಮಿತಿಯನ್ನು ಅರಿತಿರುವುದರೊಂದಿಗೆ ಕೌಟುಂಬಿಕ ಜೀವನಕ್ಕೆ ಕಡ್ಡಾಯವಾಗಿ ಮೀಸಲಿಡಲೇಬೇಕಾದ ಸಮಯದ ಅರಿವಿರಬೇಕು. ವೃತ್ತಿ ಹಾಗೂ ವೈಯಕ್ತಿಕ ಜೀವನ ಆರೋಗ್ಯಕರ ವಾತಾವರಣದಿಂದಿರಲು ಅಗತ್ಯವಾಗಿ ಬೇಕಾಗಿರುವುದು ಸಮಯವೆಂಬುದು ತಿಳಿದಿರಬೇಕು. ಕಛೇರಿಯ ಕೆಲಸಗಳನ್ನು ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸಿ ಸಂಸಾರಕ್ಕೆ ತೊಡಗಿಸಬೇಕಾದ ಸಮಯವನ್ನು ಕಡ್ಡಾಯವಾಗಿ ತೊಡಗಿಸಬೇಕು.
ಸಂದೇಹಗಳನ್ನು ಪರಿಹರಿಸಿಕೊಳ್ಳುವ ಕಲೆ: ಕಛೇರಿಯ ಕೆಲಸದಲ್ಲಿ ಯಾವುದೇ ಸಂದೇಹಗಳು ಬಂದರೂ ಅದನ್ನು ಪರಿಹರಿಸಿಕೊಂಡೇ ಮುಂದುವರೆಯುವ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಕುಟುಂಬದಲ್ಲಿ ಬರುವ ಸಣ್ಣಪುಟ್ಟ ಗೊಂದಲಗಳು ಅನುಮಾನಗಳನ್ನು ಸಮರ್ಪಕವಾಗಿ ಪರಿಹರಿಸಿಕೊಂಡೇ ಮುಂದುವರಿಯುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಗೊಂದಲಗಳೊಂದಿಗೇ ಬದುಕು ಅತಂತ್ರವಾಗಬಹುದು.
ಮನೆಯ ಸದಸ್ಯರಿಗಾಗಿ ಸಮಯ ಮೀಸಲಿಡಿ
ಮಹಿಳೆಯು ದಿನದ ೨೪ ಗಂಟೆಯೂ ಕರ್ತವ್ಯ ನಿರ್ವಹಣೆಯಲ್ಲಿರುತ್ತಾಳೆ ಎನ್ನಬಹುದು. ಏಕೆಂದರೆ ಕಛೇರಿ ಅವಧಿಯಲ್ಲಿ ಕಛೇರಿಯ ಸಿಬ್ಬಂದಿಯಾಗಿ, ಮನೆಯಲ್ಲಿ ಮಕ್ಕಳಿಗೆ ತಾಯಿಯಾಗಿ ಅವರ ಆರೈಕೆಯಲ್ಲಿ, ಅತ್ತೆ ಮಾವನಿಗೆ ಸೊಸೆಯಾಗಿ ಅವರ ಸೇವೆಯಲ್ಲಿ, ಮತ್ತು ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಪೂರ್ತಿಯಾಗಿ ವ್ಯಸ್ಥಳಾಗಿರುತ್ತಾಳೆ. ಆದ್ದರಿಂದ ಮಹಿಳೆ ಪುರುಷರಿಗಿಂತ ಹೆಚ್ಚು ಕೆಲಸವನ್ನು ನಿರ್ವಹಿಸುತ್ತಾಳೆ ಎಂದರೆ ತಪ್ಪಾಗಲಾರದು. ಆದ್ದರಿಂದ ಉದ್ಯೋಗಸ್ಥ ಮಹಿಳೆಯು ಮನೆಗೆ ಬಂದೊಡನೆ ಸಿಡಿಸಿಡಿ ಎನ್ನುವ ಬದಲು ಶಾಂತ ಮನಸ್ಸಿನಿಂದ ಕುಟುಂಬ ಸದಸ್ಯರೊಂದಿಗೆ ಅಲ್ಪ ಕಾಲವನ್ನಾದರೂ ಮೀಸಲಿಡುವುದು ಉತ್ತಮ. ಇದರಿಂದ ಕಛೇರಿಯ ಒತ್ತಡವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಬಹುದು.
ವೈವಿದ್ಯತೆಯನ್ನು ಕಾಯ್ದುಕೊಳ್ಳಿರಿ
ಕಛೇರಿ ಕೆಲಸದಲ್ಲಿ ಹೇಗೆ ಪ್ರತಿಯೊಬ್ಬರೂ ವೈವಿಧ್ಯತೆಯನ್ನು ನಿರೀಕ್ಷಿಸುತ್ತಾರೋ ಅದೇ ರೀತಿ ಮನೆಯ ವಾತಾವರಣದಲ್ಲೂ ವೈವಿಧ್ಯತೆಯನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯ. ಆದ್ದರಿಂದ ವಾರದ ರಜಾ ದಿನಗಳಂದು ಕುಟುಂಬ ಸಮೇತರಾಗಿ ಹೊರಗಡೆ ಸುತ್ತಾಡಿಕೊಂಡು ಬರುವುದು, ತ್ರೆöÊಮಾಸಿಕಕ್ಕೊಂದು ಬಾರಿ ಅಥವಾ ವರ್ಷಕ್ಕೊಮ್ಮೆಯಾದರೂ ದೂರದೂರಿಗೆ ಪ್ರವಾಸ ಹೋಗುವ ಜಾಯಮಾನವನ್ನು ಬೆಳೆಸಿಕೊಂಡಾಗ ಕುಟುಂಬದಲ್ಲಿ ಹೊಸ ಸಂತಸದ ವಾತಾವರಣವನ್ನು ಮೂಡಿಸಬಹುದು.
ವಿಶೇಷ ದಿನಗಳನ್ನು ಸದಾ ನೆನಪಿನಲ್ಲಿಡುವುದು
ಮಹಿಳೆ ಉದ್ಯೋಗಸ್ಥೆಯಾಗಿದ್ದರೂ ಕಛೇರಿಯ ವಿಶೇಷ ದಿನಗಳು ಹಾಗೂ ಕುಟುಂಬದ ವಿಶೇಷ ದಿನಗಳನ್ನು ಎಂದೂ ಮರೆಯದೆ ಅವುಗಳನ್ನು ಸಮರ್ಪಕವಾಗಿ ಆಚರಿಸುವ ಮಾನೋಭಾವವನ್ನು ಹೊಂದಿರಬೇಕು. ಕಛೇರಿಯಲ್ಲಿ ವಿಶೇಷ ಸಂದರ್ಭಗಳಾದ ಹೊಸ ವರ್ಷಾಚರಣೆ, ದೀಪಾವಳಿ, ಸ್ವ್ವಾತಂತ್ರೋತ್ಸವ, ಯುಗಾದಿ ಹಬ್ಬಗಳು, ಸಹೋದ್ಯೋಗಿಗಳ ಹುಟ್ಟುಹಬ್ಬಗಳನ್ನು ಆಚರಿಸುವುದು ಮತ್ತು ಕುಟುಂಬದ ವಿಶೇಷ ಸಂದರ್ಭಗಳಾದ ವಿವಾಹ ವಾರ್ಷಿಕೋತ್ಸವ, ಕುಟುಂಬಸ್ಥರ ಹುಟ್ಟುಹಬ್ಬ, ಹಬ್ಬಗಳು ಇತ್ಯಾದಿಗಳನ್ನು ಆಚರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಔದ್ಯೋಗಿಕ ಬದುಕಿನಲ್ಲಿ ಯಶಸ್ವಿಯಾಗಿ ಅತ್ಯುತ್ತಮ ಉದ್ಯೋಗಿ ಎಂಬ ಹೆಸರನ್ನು ಪಡೆದ ಅದೆಷ್ಟೋ ಮಂದಿ ಮಹಿಳೆಯರು ತಮ್ಮ ಸಾಂಸಾರಿಕ (ವೈಯಕ್ತಿಕ) ಬದುಕಿನಲ್ಲಿ ವಿಫಲರಾಗಿರುವ ಅದೆಷ್ಟೋ ದೃಷ್ಟಾಂತಗಳನ್ನು ನಾವು ನೋಡುತ್ತೇವೆ. ಅಂತಹ ಸಾಧಕರು ಕೇವಲ ವೃತ್ತಿಯೇ ಸರ್ವಸ್ವವೆಂಬ ಭಾವನೆಯಿಂದ ವೈಯಕ್ತಿಕ ಜೀವನದಲ್ಲಿ ವಿಫಲರಾಗಿ ಔದ್ಯೋಗಿಕ ಜೀವನದಲ್ಲಷ್ಟೇ ಯಶಸ್ವಿಯಾದರೆ ಪ್ರಯೋಜನವಿಲ್ಲ. ಅದೇ ರೀತಿ ವೈಯಕ್ತಿಕ ಬದುಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಔದ್ಯೋಗಿಕ ಬದುಕನ್ನು ಪೂರ್ತಿ ಮರೆತು ಸೋತಂತಹ ಮಹಿಳೆಯರ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ. ಆದ್ದರಿಂದ ಉದ್ಯೋಗಸ್ಥ ಮಹಿಳೆ ವೃತ್ತಿ ಹಾಗೂ ಸಂಸಾರ ಎರಡನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುವುದು ಇಂದಿನ ಆಧುನಿಕ ದಿನಗಳಲ್ಲಿ ಅನಿವಾರ್ಯವಾಗಿದೆ.
