ಹಳೆ ಪಿಂಚಣಿ ಯೋಜನೆ ಜಾರಿಗೆ ದೆಹಲಿ ತಲುಪಿದ ಭಾರತ ಯಾತ್ರೆ
ಆಲಮಟ್ಟಿ: ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಭಾರತ ಬಂದ್ ನಡೆಸಲು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಯೋಜನೆ ರೂಪಿಸುತ್ತಿದೆ ಎಂದು ಎಐಪಿಟಿಎಫ್ ಸಂಘಟನೆಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಗುರುವಾರ ನವದೆಹಲಿಯ ಸಿರಿಪೋರ್ಟ್ ಅಡಿಟೋರಿಯಂ ನಲ್ಲಿ ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆದ ಭಾರತ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳೆ ಪಿಂಚಣಿ ಯೋಜನೆ ಜಾರಿ ನಮ್ಮ ಹಕ್ಕು, ಎನ್ ಪಿಎಸ್ ನಿಂದ ನೌಕರರ ನಿವೃತ್ತಿ ಬಾಳು ಗಂಭೀರವಾಗಲಿದೆ. ಅದನ್ನು ಹಲವು ರಾಜ್ಯಗಳಲ್ಲಿ ಈಗಾಗಲೇ ರದ್ದಾಗಿದೆ. ಇಡೀ ದೇಶಾದ್ಯಂತ ಈ ಯೋಜನೆ ರದ್ದಾಗಬೇಕು ಎಂಬುದು ನಮ್ಮ ಹೋರಾಟ ಎಂದರು.
ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಯಾತ್ರೆ ೧೦,೦೦೦ ಕಿ.ಮೀ ಸಂಚರಿಸಿ ನವದೆಹಲಿ ತಲುಪಿದೆ. ಆಸ್ಸಾಂನ ಗುಹಾಹಟಿಯಿಂದ ನವದೆಹೆಲಿ, ಪಂಜಾಬ್ ನ ವಾಗಾ ಬಾರ್ಡರ್ ನಿಂದ ನವದೆಹಲಿ, ಗುಜರಾತ್ ನ ಸೋಮನಾಥಪುರದಿಂದ ನವದೆಹಲಿಯವರೆಗೆ ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ಜರುಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಶಿಕ್ಷಕ ಸಂಘಟನೆಯ ಅಧ್ಯಕ್ಷ ಸುಸ್ಮನ್ ಹೂಪಡ್, ಕಾರ್ಯದರ್ಶಿ ರಾಬರ್ಟ್, ಉಪಾಧ್ಯಕ್ಷೆ ಇ. ಕರೇನಾ, ಮಹಾ ಪ್ರಧಾನಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ಹರಿಗೋವಿಂದನ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ರಾಮಚಂದ್ರ ಬಾಸ್, ಸೀಮಾ ಮಾಥೂರ್, ರಮಾದೇವಿ, ರೇಲ್ವೆ ಯೂನಿಯನ್ ಅಧ್ಯಕ್ಷ ಶಿವಪಾಲ್ ಮಿಶ್ರಾ ರೋನಿ ರೋಶನ್ ಮಾತನಾಡಿದರು.
ಈ ಸಂದರ್ಭದದಲ್ಲಿ ವಿ.ಎಫ್. ಚುಳಕಿ, ಮಂಜುನಾಥ ಜಂಗಲಿ, ವಿಜಯಪುರ ಜಿಲ್ಲೆಯ ನಾನಾ ತಾಲ್ಲೂಕಿನ ಎನ್ ಪಿಎಸ್ ಶಿಕ್ಷಕರು ಉಪಸ್ಥಿತರಿದ್ದರು.
ದೇಶದ ನಾನಾ ಕಡೆಯಿಂದ ಆಗಮಿಸಿದ್ದ ಎನ್ ಪಿಎಸ್ ಗೆ ಒಳಪಡುವ ಸಾವಿರಾರು ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಆಲಮಟ್ಟಿಯಲ್ಲಿನ ಸುದ್ದಿಗಾರರಿಗೆ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ದೂರವಾಣಿ ಮೂಲಕ ತಿಳಿಸಿದರು.