ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಓ) ಅಧಿಕಾರಿ ಜಯರಾಜ ಭೃಂಗಿಮಠ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದಲ್ಲಿ ಖಾಸಗಿ ವಾಹನಗಳನ್ನು ಬಾಡಿಗೆಗೆ ನೀಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಓ) ಅಧಿಕಾರಿ ಜಯರಾಜ ಭೃಂಗಿಮಠ ಹಾಗೂ ಅವರ ತಂಡ ಚಡಚಣದ ಎಪಿಎಮ್‌ಸಿ ಯಾರ್ಡ ಮುಂದುಗಡೆ ಇರುವ ಶ್ರೀ ಸಂಗಮೇಶ್ವರ ಚಾಲಕರ ಹಾಗೂ ಮಾಲಿಕರ ಸಂಘದ ಬಾಡಿಗೆಗೆ ಎಂದು ನಿಲ್ಲುವ ಪಾರ್ಕಿಂಗ್ ಸ್ಥಳಕ್ಕೆ ಧೀಡಿರ್ ದಾಳಿ ನಡೆಸಿ ಬಿಳಿ ನಂಬರ್ ಪ್ಲೇಟ್ ಹೊಂದಿದ ಬಾಡಿಗೆ ಕೊಡಲು ಸಜ್ಜಾದ ವಾಹನಗಳನ್ನು ದಂಡ ವಿಧಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ.
ಬಾಡಿಗೆ ವಾಹನ ಚಾಲಕರು ಇನ್ನು ಮುಂದೆ ಕಡ್ಡಾಯವಾಗಿ ಖಾಕಿ ಬಣ್ಣದ ಉಡುಪುಗಳು ಧರಿಸಲೇಬೇಕು ಮತ್ತು ಅವರ ಹೆಸರು ಮತ್ತು ಊರಿನ ಹೆಸರು ಇರುವ ಲೋಗೊ ಕಡ್ಡಾಯವಾಗಿ ಇರಲೇಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ರಸ್ತೆಯಲ್ಲಿ ತಿರುಗಾಡಬೇಕೆಂದರೆ ತಮ್ಮ ಪ್ರಾಣ ಕೈಯಲ್ಲಿ ಹಿಡಿದು ಹೋಗುವ ಪ್ರಸಂಗ ಬಂದಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ಆರ್‌ಟಿಓ ಅಧಿಕಾರಿಗಳ ಗಮನಕ್ಕೆ ತಂದರು.
ಬಾಡಿಗೆ ವಾಹನ ಮಾಲಿಕರಿಗೆ ಮತ್ತು ಬಾಡಿಗೆ ವಾಹನ ಚಾಲಕರಿಗೆ ಎಚ್ಚರಿಸಿದ ಅವರು ಚಡಚಣ ಹೆದ್ದಾರಿ ರಾಜ್ಯ ಹೆದ್ದಾರಿ ಆಗಿರುವದರಿಂದ ರಸ್ತೆಯ ಮಧ್ಯ ಭಾಗದಿಂದ ೫೦ ಫೂಟ ಅಂದರೆ ಸಾರ್ವಜನಿಕರ ಕಾಲುದಾರಿ(ಫೂಟ್ ಪಾಥ)ಬಿಟ್ಟು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಹೇಳಿದರು.
ಇಲ್ಲಿ ರಸ್ತೆಯ ಮೇಲೆ ಓಡಾಡುವ ಇನ್ನಿತರ ವಾಹನಗಳಿಗೆ, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತಿರುಗಾಡಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಿದರು.
ಇನ್ನು ಮುಂದೆ ಬಾಡಿಗೆಗೆ ವಾಹನ ನಿಲ್ಲುವ ಸ್ಥಳದಲ್ಲಿ ಖಾಸಗಿ ವಾಹನ ನಿಲ್ಲಿಸಿರುವದು ಮತ್ತು ಅದರ ಫೋಟೊ ಅಥವಾ ವಿಡಿಯೋ ತುಕಡಿಗಳು ಕಂಡು ಬಂದರೆ ಆ ನಂಬರಿನ ಖಾಸಗಿ ವಾಹನದ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಆ ಸ್ಥಳಗಳಲ್ಲಿ ಮಹಾರಾಷ್ಟ್ರ ಅಥವಾ ಹೊರ ರಾಜ್ಯದ ಆರ್‌ಟಿಓ ಕಛೇರಿಯಲ್ಲಿ ನೊಂದಣಿಯಾದ ವಾಹನಗಳು ಕಂಡು ಬಂದರೂ ಕಠಿಣ ಕಾನೂನು ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಬೇರೆ ರಾಜ್ಯದ ವಾಹನಗಳಿದ್ದರೆ ಕರ್ನಾಟಕದಲ್ಲಿ ಬಾಡಿಗೆ ಕೊಡುವದಾದರೆ ಕರ್ನಾಟಕ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆದಂತೆ. ಹಾಗಾಗಿ ಕರ್ನಾಟಕ ರಾಜ್ಯದ ಆರ್‌ಟಿಓ ಕಛೇರಿಯಲ್ಲಿ ನೊಂದಣಿ ಕಡ್ಡಾಯ ಇರುವದರಿಂದ ಕೂಡಲೆ ನೊಂದಣಿ ಮಾಡಿಸಿಕೊಂಡು ಹಳದಿ ಫಲಕ ಅಳವಡಿಸಿಕೊಳ್ಳಲು ಸೂಚಿಸಿದರು.
ಅಧಿಕೃತ ಪರವಾನಗಿ ಇಲ್ಲದೇ ಖಾಸಗಿ ವಾಹನಗಳನ್ನು ಮದುವೆ, ಪ್ರವಾಸ ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಪುನಃ ಎಚ್ಚರಿಕೆ ನೀಡಿದ್ದಾರೆ. ಇಂತಹ ವಾಹನ ಕಂಡುಬಂದರೆ ಮಾಲೀಕರಿಗೆ ಭಾರೀ ದಂಡ ಮತ್ತು ವಾಹನ ವಶಕ್ಕೆ ಪಡೆಯುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಸಂಗಮೇಶ್ವರ ಚಾಲಕರ ಹಾಗೂ ಮಾಲಿಕರ ಸಂಘದ ಅಧಿಕೃತ ಹಳದಿ ಫಲಕ ಉಳ್ಳ ಮತ್ತು ಕರ್ನಾಟಕ ಆರ್‌ಟಿಓ ನೊಂದಣಿ ಹೊಂದಿದ ವಾಹನ ಮಾಲಿಕರು ಮತ್ತು ಚಾಲಕರು,ಸ್ಥಳಿಯರು ಇದ್ದರು.
ಸಾರಿಗೆ ನಿಯಮ ಪಾಲನೆ ಮುಖ್ಯ
ಆರ್‌ಟಿಓ ಅಧಿಕಾರಿಗಳ ಪ್ರಕಾರ, ಬಾಡಿಗೆ ಸೇವೆಗೆ ಬಳಸುವ ವಾಹನಗಳು ವಾಣಿಜ್ಯ (ಕಾಮರ್ಷಿಯಲ್) ಪರವಾನಗಿ, ವಿಮೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯವಾಗಿ ಚಾಲಕರು ಹೊಂದಿರಬೇಕು. ಆದರೆ ಅನೇಕರು ಬಿಳಿ ನಾಮ ಫಲಕ ಹೊಂದಿದ ಖಾಸಗಿ ನಂಬರಿನ ಕಾರು, ಜೀಪ್,ಕ್ರೂಜರ್ ಹಾಗೂ (ಮಿನಿ)ಬಸ್ಸುಗಳನ್ನು ಬಾಡಿಗೆಗೆ ನೀಡಿ ವಾಹನ ಮಾಲಿಕರು ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಈ ಎಲ್ಲ ನಿಯಮಗಳು ಸಾರ್ವಜನಿಕರ ಮತ್ತು ಪ್ರವಾಸಿಗರ ಸುರಕ್ಷತೆ ಹಾಗೂ ಸಾರಿಗೆ ನಿಯಮ ಪಾಲನೆ ಮುಖ್ಯ. ಖಾಸಗಿ ವಾಹನಗಳನ್ನು ಬಾಡಿಗೆಗೆ ನೀಡುವುದು ಕಾನೂನುಬಾಹಿರ. ನಾಗರಿಕರು ಇಂತಹ ಸೇವೆ ಪಡೆಯುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

