ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ಇದರಂಗವಾಗಿ ದಿ.೪ ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು ಮೌಲಾನಾ ಯೂಸೂಫ್ ಖಾದ್ರಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉರುಸು ಅಂಗವಾಗಿ ಅನೇಕ ಸಿದ್ದತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ, ಮಾನವೀಯತೆ, ಶಾಂತಿ, ಸಹೋದರತೆ ತತ್ವ ಸಾರಿದ ಅರ್ಕಾಟ್ ದರ್ಗಾದ ಹಜರತ್ ಸೈಯ್ಯದ್ ನಾ ಅಬ್ದುಲ್ ಷಾ ಖಾದ್ರಿ ಅವರ ಉರುಸಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಹಸಿದವರಿಗೆ ಅನ್ನ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಪಾರಂಪರಿಕ ಆಯುರ್ವೇದ ಔಷಧಿ ದೊರಕುವ ಮೂಲಕ ದವಾ ಹಾಗೂ ದುವಾ ಎರಡು ಇಲ್ಲಿ ಲಭ್ಯ ಎಂದರು.ಉರುಸು ಅಂಗವಾಗಿ ಶಾಂತಿ ಯಾತ್ರೆ ದಿ.೪ ರಂದು ನಡೆಯಲಿದ್ದು, ದರ್ಗಾದ ಪ್ರಸ್ತುತ ಸಜ್ಜಾದೆ ನಷೀನ್ ಹಜರತ್ ಇಕ್ಬಾಲ್ ಪೀರಾ ಹುಸೈನಿ ಹಾಗೂ ಅವರ ಪುತ್ರ ಡಾ.ಸೈಯ್ಯದ್ ತಕೀ ಪೀರಾ ಹುಸೈನಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ದಿ.೪ ರಂದು ಭವ್ಯ ಯಾತ್ರೆ ಸೊಲ್ಲಾಪೂರ ನಾಕಾದಿಂದ ಆರಂಭಗೊಳ್ಳಲಿದೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಯಾತ್ರೆ ಶಹಾಪೂರ ದರ್ವಾಜಾ, ಸರಾಫ್ ಬಜಾರ್, ಗಾಂಧಿವೃತ್ತ, ಅತಾವುಲ್ಲಾ ಸರ್ಕಲ್, ಬಡಿಕಮಾನ್, ಜಾಮೀಯಾ ಮಸೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರ್ಗಾ ತಲುಪಲಿದೆ ಎಂದರು.
ತೌಪೀಕ ಬೇಪಾರಿ, ಇರಾಪ ಸುನ್ನೆವಾಲೆ, ಮಹೇಪೊಜ ರಹೆಮಾನ, ಆಸೀಫ್ ಬಾಗವಾನ, ಮೌಲಾನಾ ಹುಸೇನ ರಜ್ವಿ,
ಮೌಲಾನಾ ಇರ್ಪಾನ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

