ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷಿ ಆಧಾರಿತ ಸಹಕಾರಿ ಚಳುವಳಿಗೆ ವಿಜಯಪುರ ಜಿಲ್ಲೆಯ ಕೊಡುಗೆ ಅನುಪಮವಾಗಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದಲ್ಲಿ ದಿ.ಆರ್.ಎಂ.ಪಾಟೀಲ ವಾಣಿಜ್ಯ ಸಂಕಿರಣ ಉದ್ಘಾಟಿಸಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿ ರಂಗದಲ್ಲಿ ಇರುವವರಿಗೆ ಪ್ರಾಮಾಣಿಕತೆ, ಸೇವಾ ಬದ್ಧತೆ ಮುಖ್ಯವಾಗಿದೆ. ಅನ್ಯರ ಅಭ್ಯುದಯದಲ್ಲಿ ತಮ್ಮ ಸಂತೃಪ್ತಿ ಕಾಣುವುದೇ ಸಹಕಾರಿ ಧ್ಯೇಯ ಎಂದು ವಿವರಿಸಿದರು.
ಗ್ರಾಮೀಣ ಭಾಗದಲ್ಲಿ ರೈತರಿಗೆ ಕೃಷಿ ಹಾಗೂ ತುರ್ತು ಆರ್ಥಿಕ ಅಗತ್ಯಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ನೆರವಿಗೆ ಬರುವುದಿಲ್ಲ. ಆದರೆ ಹಳ್ಳಿಗರ ಆರ್ಥಿಕ ಅಗತ್ಯಕ್ಕೆ ತುರ್ತು ಸ್ಪಂದನೆ ನೀಡುವ ಕೆಲಸವನ್ನು ಗ್ರಾಮೀಣ ಸಹಕಾರಿ ಸಂಸ್ಥೆಗಳು ಮಾಡುತ್ತವೆ. ಹೆಗಡಿಹಾಳ ಗ್ರಾಮದಲ್ಲಿ ಜನ್ಮ ತಳೆದಿರುವ ವಿವಿಧ ಉದ್ದೇಶಗಳ ಸಹಿತ ಗ್ರಾಮೀಣ ಹಾಗೂ ಕೃಷಿಕರ ಅಗತ್ಯ ಹಾಗೂ ಹಿತರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸಿದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶಾಸಕ ವಿಠ್ಠಲ ಕಟಕಧೋಂಡ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಿಇಒ ಎಸ್.ಎ.ಢವಳಗಿ, ಸಂಸ್ಥೆಯ ಅಧ್ಯಕ್ಷ ಹೊನ್ನೇಶ ಮುರುಗೋಡ, ಅಶೋಕಗೌಡ ಪಾಟೀಲ, ಬಸವರಾಜ ಅರಕೇರಿ, ರಾಜಣ್ಣ ಮುದನೂರು, ಮಲ್ಲನಗೌಡ ಬಿರಾದಾರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಹೆಗಡಿಹಾಳ ತಾಂಡಾ, ಉಕುಮನಾಳ, ಕತಕನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

