ಗಾಣಗಾಪೂರದಲ್ಲಿ ಕಾಳಜಿ ಕೇಂದ್ರಕ್ಕೆ ಭೇಟಿ | ಸಂತ್ರಸ್ತರ ಅಹವಾಲು ಸ್ವಿಕಾರ | ನಿತೀನ್ ಗುತ್ತೇದಾರ ಬೆಂಬಲಿಗರಿಂದ ಬೆಡ್ ಶೀಟ್ ವಿತರಣೆ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಭಾರಿ ಮಳೆ ಮತ್ತು ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಡುಗಡೆಯಿಂದಾಗಿ ಕಲಬುರಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಪಕ್ಷದ ಹಿರಿಯ ನಾಯಕರೊಂದಿಗೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ದೇವಲ ಗಾಣಗಾಪೂರಕ್ಕೆ ಭೇಟಿ ನೀಡಿದರು.
ಅವರು ಪ್ರವಾಹ ಪೀಡಿತ ಸ್ಥಳಗಳು ಹಾಗೂ ಕಾಳಜಿ ಕೇಂದ್ರಗಳ ಭೇಟಿ ನೀಡಿ ಮಾತನಾಡುತ್ತಾ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಮುಖ್ಯಮಂತ್ರಿಗಳು ಬರೀ ಜಾತಿ ಗಣತಿಯಲ್ಲಿ ತೊಡಗಿದ್ದಾರೆ. ಕೃಷಿ, ಕಂದಾಯ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸದಾ ಆಕಾಶದಲ್ಲಿರುತ್ತಾರೆ, ಹೀಗಾಗಿ ನೆಲದ ಮೇಲಿನ ಜನರ ಕಷ್ಟ ಕಾಣೋದಿಲ್ಲ. ಸ್ವತಃ ಅವರ ಚಿತ್ತಾಪುರ ಕ್ಷೇತ್ರದ ಜನರು ಕೂಡ ಅವರ ನಡೆಯಿಂದ ಬೇಸತ್ತು ನನ್ನ ಎದುರು ಅಳಲು ತೋಡಿಕೊಂಡಿದ್ದಾರೆ ಎಂದ ಅವರು, ಎನ್.ಡಿ.ಆರ್.ಎಫ್ ನಿಂದ ಪರಿಹಾರ ಎಷ್ಟು ಬರಬೇಕೋ ಅಷ್ಟು ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ಕೂಡ ಮುಂದೆ ಬಂದು ಪರಿಹಾರ ವಿತರಿಸಬೇಕು. ಅಧಿಕಾರಿಗಳನ್ನು ಬಂದು ಭೇಟಿ ಮಾಡಿ ಹೋಗುವುದರಲ್ಲಿ ಅರ್ಥವಿಲ್ಲ, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಸರ್ಕಾರ ಆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಕಳೆದ ಬಾರಿ ಪ್ರವಾಹ ಬಂದಾಗ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಕ್ಷಣ ವೈಮಾನಿಕ ಸಮೀಕ್ಷೆ ನಡೆಸಿ ಎನ್‌ಡಿಆರ್‌ಎಫ್ ಅನುದಾನ ಬರುವ ತನಕ ಕಾಯದೆ ತಕ್ಷಣ ಮನೆ ಕಳೆದುಕೊಂಡವರಿಗೆ ತಲಾ ೫ ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ. ಸರ್ಕಾರವೇ ಕುಂಭಕರ್ಣ ನಿದ್ದೆಯಲ್ಲಿದೆ. ಅವರನ್ನು ಎಬ್ಬಿಸುವ ಕೆಲಸ ನಾವು ಮಾಡುತ್ತೇವೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡುತ್ತಾ ನಮ್ಮ ಸರ್ಕಾರವಿದ್ದಾಗ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ಈಗ ಇದ್ದವರು ದಪ್ಪ ಚರ್ಮದವರಿದ್ದಾರೆ ಇವರಿಗೆ ಜನರ ಸಮಸ್ಯೆಗಳು ಕಾಣುತ್ತಿಲ್ಲ ಎಂದ ಅವರು ಪ್ರವಾಹದಿಂದಾಗಿ ರೈತರ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಹಾಳಾದ ಬೆಳೆಗೆ ಯೋಗ್ಯ ರೀತಿಯ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಬೆಂಬಲಿಗರು ಸಂತ್ರಸ್ತರಿಗೆ ಬೆಡ್ ಶೀಟ್‌ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಎ.ಎಸ್.ಪಾಟೀಲ್ ನಡಹಳ್ಳಿ, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ್,ಅಮರನಾಥ ಪಾಟೀಲ್, ನಿತಿನ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್, ಅಶೋಕ ಬಗಲಿ, ವಿದ್ಯಾಧರ ಮಂಗಳೂರೆ, ಅವ್ವಣ್ಣ ಮ್ಯಾಕೇರಿ, ಶರಣಬಸಪ್ಪ ಪದಕಿ, ರಾಜಶೇಖರ ಜಿಡ್ಡಗಿ, ರಮೇಶ ಬಾಕೆ, ರಾಘವೇಂದ್ರ ಕುಲಕರ್ಣಿ, ಜ್ಯೋತಿಪ್ರಕಾಶ್ ಪಾಟೀಲ್, ಧಾನು ಪತಾಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರ

ಸಂತ್ರಸ್ತರ ಅಳಲು ಆಲಿಸಿದ ಬಿವೈವಿ
ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸುವ ವೇಳೆಯಲ್ಲಿ ಸುಮಂಗಲ ಎನ್ನುವ ಮಹಿಳೆ ಕಣ್ಣೀರಿಟ್ಟು ಬಿ.ವೈ ವಿಜಯೇಂದ್ರ ಅವರೆದುರು ಅಳಲು ತೋಡಿಕೊಂಡು ಮಾತನಾಡುತ್ತಾ, ಪ್ರತಿ ವರ್ಷ ಪ್ರವಾಹ ಬಂದಾಗ ನಮ್ಮ ಪರಿಸ್ಥಿತಿ ಇದೆ ರೀತಿ ಇರುತ್ತದೆ. ಇಲ್ಲಿವರೆಗೂ ನಮಗೆ ಯಾರೂ ಸ್ಪಂದಿಸಿಲ್ಲ, ಉಟ್ಟ ಬಟ್ಟೆ ಮೇಲೆ ಹೊರಗಡೆ ಬಂದಿದ್ದೇವೆ. ನಮಗೆ ಪರಿಹಾರ ಬೇಡ ಶಾಶ್ವತ ಸೂರು ಕಲ್ಪಿಸಿ ಎಂದು ಅಳಲು ತೋಡಿಕೊಂಡರು.

