ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಜನತೆಯಲ್ಲಿ ಅತೀ ಮಳೆಯಿಂದ ಭೂಮಿ ಕಂಪಿಸಿದ್ದು, ಜನ ಭಯದಿಂದ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇದರ ಕುರಿತು ಜಿಲ್ಲಾಡಳಿತ ತಂತ್ರಾಂಶದಿಂದ ಇನ್ನಷ್ಟು ಮಾಹಿತಿ ಕಲೆ ಹಾಕಿ ಜನರಲ್ಲಿರುವ ಭಯ ಹೋದಲಾಡಿಬೇಕು ಎಂದು ಜಿಲ್ಲಾ ವಕ್ತಾರ ಹಾಗೂ ತಾಲೂಕು ಉಸ್ತುವಾರಿ ಚನ್ನಪ್ಪಗೌಡ ಬಿರಾದಾರ ಮನವಿ ಮಾಡಿಕೊಂಡಿದ್ದಾರೆ.
ಸಿಂದಗಿ ಜಯ ಕರ್ನಾಟಕ ಸಂಘಟನೆ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸುವ ಮೊದಲು ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಸತತವಾಗಿ ಸುರಿದ ಮಳೆ ಮತ್ತು ಭೀಮಾ ನದಿಯ ಪ್ರವಾಹದಿಂದ ಹತ್ತಿ, ತೊಗರಿ, ಕಬ್ಬು, ಉದ್ದು, ಈರುಳ್ಳಿ, ಸೂರ್ಯಕಾಂತಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಮಾತನಾಡಿ, ಸತತವಾಗಿ ಸುರಿದ ಮಳೆಯಿಂದ ಆಲಮೇಲ ಮತ್ತು ಸಿಂದಗಿ ತಾಲೂಕಿನ ರೈತರ ಬೆಳೆಗಳು ಹಾನಿಯಾಗಿದ್ದು, ಕೂಡಲೇ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇವರ ಹಿಪ್ಪರಗಿ ತಾಲೂಕಾಧ್ಯಕ್ಷ ಸಿದ್ದರಾಮಪ್ಪ ಅವಟಿ, ಪದಾಧಿಕಾರಿಗಳಾದ ನಾಗಣ್ಣ ಪಡೇಕನೂರ, ಶರಣು ಮನಗೂಳಿ, ಶಿವಪುತ್ರ ಮಲ್ಲೆದ, ಸಿದ್ದನಗೌಡ ಅಂಬಳನೂರ,ಅಬ್ದುಲ್‌ಖೇಡ ಚಟ್ಟರಕಿ, ಮುಸ್ತಾಪ್ ಬಳಗಾನೂರ, ಮಲ್ಲಯ್ಯ ನಂದಿಕೋಲ ಸೇರಿದಂತೆ ಇತರರು ಇದ್ದರು.

