ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪೇಪರ್ ಪುನರುತ್ಪಾದನಾ ಘಟಕದ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ಪ್ರಧಾನ ಮಂತ್ರಿ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದ ಅಡಿಯಲ್ಲಿ ‘ಪೇಪರ್ ಪುನರುತ್ಪಾದನಾ ತಂತ್ರಜ್ಞಾನ’ದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ. ಪರಿಸರಕ್ಕೆ ಹಾನಿಯಾಗುವಂತಹ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕೀರ್ತಿ ಪೇಪರ್ಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಿಬ್ಬಂದಿ ನಿಂಗಪ್ಪ ಗೊಂಡಿ ಮಾತನಾಡಿ, ಇಂದು ಪುನರುತ್ಪಾದನಾ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ವಸ್ತುಗಳಿಗೆ ಉತ್ತಮ ಬೇಡಿಕೆ ಇದೆ. ಈ ವಸ್ತುಗಳನ್ನು ತಯಾರಿಸಲು ಬೃಹತ್ ಯಂತ್ರೋಪಕರಣಗಳ ಅಗತ್ಯವಿಲ್ಲ, ಕಾರ್ಖಾನೆಗಳ ಅಗತ್ಯವೂ ಇಲ್ಲ. ಸಣ್ಣ ಪ್ರಮಾಣದ ಯಂತ್ರಗಳನ್ನು ಅಳವಡಿಸಿ ಈ ವಸ್ತುಗಳನ್ನು ತಯಾರಿಸಲು ಸಾಧ್ಯವಿದೆ. ಸರ್ಕಾರವೂ ಇಂತಹ ಉದ್ಯಮಗಳನ್ನು ಆರಂಭಿಸಲು ಆರ್ಥಿಕ ಬೆಂಬಲ ನೀಡುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಮಹಿಳಾ ತಂತ್ರಜ್ಞಾನ ಪಾರ್ಕಿನ ವಿಶೇಷ ಅಧಿಕಾರಿ ಪ್ರೊ. ರಾಜು ಬಾಗಲಕೋಟ ಮಾತನಾಡಿ, ಪೇಪರ್ ಪುನರುತ್ಪಾದನಾ ತಂತ್ರಜ್ಞಾನ ಪರಿಸರಕ್ಕೆ ಪೂರಕವಾದ ತಂತ್ರಜ್ಞಾನ, ಈ ತಂತ್ರಜ್ಞಾನವನ್ನು ಬಳಸಿ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಲು ಸಾಧ್ಯವಿದೆ. ಈ ವಸ್ತುಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತುಗಳು ಮತ್ತು ಪರಿಸರಕ್ಕೂ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪೇಪರ್ ಪುನರುತ್ಪಾದನಾ ಘಟಕದ ಸಿಬ್ಬಂದಿ ಗೀತಾ ಗಂಗಾಧರ ದಲಾಲ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಡತ ನಿರ್ಮಾಣ ಪ್ರಕ್ರಿಯೆಯನ್ನು ತೋರಿಸಿ ತರಬೇತಿ ನೀಡಿದರು. ಪೇಪರ್ ಪುನರುತ್ಪಾದನಾ ಘಟಕದ ಸಂಯೋಜಕ ಡಾ. ಅಕ್ಷಯ ಯಾರ್ದಿ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಒಟ್ಟು ೧೦೦ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

