ಆತಂಕಕೊಳಗಾದ ವಿದ್ಯಾರ್ಥಿನಿಯನ್ನು ಸಮಾಧಾನಪಡಿಸಿದ ಶಿಕ್ಷಕರು
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಇಂಗ್ಲೀಷ್ ವಿಷಯದಲ್ಲಿ ಕೇವಲ 06 ಅಂಕ ಪಡೆದು ಅನುತ್ತೀರ್ಣಳಾಗಿದ್ದ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಮಾದೇವ ಚೌಧರಿ ಉತ್ತರ ಪತ್ರಿಕೆಯ ಫೋಟೊ ಪ್ರತಿ ಪಡೆದಾಗ 64 ಅಂಕ ಪಡೆದಿರುವುದು ಬೆಳಕಿಗೆ ಬಂದಿದೆ.
ಫಲಿತಾಂಶದ ನಂತರ ಅನುತ್ತಿರ್ಣಗೊಂಡ ಶ್ರೇಯಾ ಅಳುತ್ತಾ, ಊಟ, ನಿದ್ದೆ ಬಿಟ್ಟು ಚಿಂತೆಗೆ ಒಳಗಾಗಿದ್ದಳು. ಸಂಸ್ಥೆಯ ಅಧ್ಯಕ್ಷ ಚಿದಾನಂದ ಅವಟಿ ಹಾಗೂ ಸಹ ಶಿಕ್ಷಕರು ವಿಧ್ಯಾರ್ಥಿನಿ ಮನೆಗೆ ಭೇಟಿ ನೀಡಿ ದೈರ್ಯ ತುಂಬಿ ಉಳಿದ ಎಲ್ಲ ವಿಷಯಗಳ ಅಂಕಗಳನ್ನು ಫಲಿತಾಂಶದಲ್ಲಿ ವೀಕ್ಷಿಸಿದರು. ಪ್ರತಿಭಾನ್ವಿತ ವಿಧ್ಯಾರ್ಥಿನಿಯಾದ ಇವಳ ಉಳಿದೆಲ್ಲ ವಿಷಯಗಳ ಅಂಕಗಳು ಹೆಚ್ಚಿಗೆ ಬಂದಿರುವದನ್ನು ಗಮನಿಸಿದ ಅವಟಿಯವರು ಇಂಗ್ಲೀಷ್ ವಿಷಯದಲ್ಲಿ ಅನುತ್ತಿರ್ಣಗೊಳ್ಳಲು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿಂದ ಉತ್ತರ ಪತ್ರಿಕೆಯ ಫೊಟೊ ಪ್ರತಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಗೆ(ಕೆಎಸ್‌ಇಎಬಿ) ಅರ್ಜಿ ಸಲ್ಲಿಸಿದರು.
ಉತ್ತರ ಪತ್ರಿಕೆ ವಿದ್ಯಾರ್ಥಿಯ ಕೈಸೇರಿದಾಗ ಮೌಲ್ಯಮಾಪಕರ ಎಡವಟ್ಟು ಬೆಳಕಿಗೆ ಬಂದಿದ್ದು, ಅವಳು ಇಂಗ್ಲೀಷ ವಿಷಯದಲ್ಲಿ 64 ಅಂಕ ಗಳಿಸಿದ್ದಾಳೆ.
ನಾನು ಎಲ್ಲ ವಿಷಯ ಸೇರಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು. ಫಲಿತಾಂಶ ನೋಡಿದ ನಂತರ ನಂಬಲು ಅಸಾಧ್ಯವಾಯಿತು. ಆದರೂ ಕೂಡಾ ನಾನು ಇಂಗ್ಲೀಷ್ ವಿಷಯದಲ್ಲಿ 60 ಕ್ಕಿಂತ ಹೆಚ್ಚಿನ ಅಂಕ ಬರಬೇಕಿತ್ತು ಎಂದು ಶಿಕ್ಚಕರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದೇನೆಂದು ಶ್ರೇಯಾ ಹೇಳಿದಳು.

