ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಅರಣ್ಯ ಇಲಾಖೆಯ ಕಾರ್ಮಿಕರಿಗೆ ಭವಿಷ್ಯ ನಿಧಿ, ವೈದ್ಯಕೀಯ ವಿಮೆ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಭರವಸೆ ನೀಡಿದರು.
ಆಲಮಟ್ಟಿಯ ಡ್ಯಾಂ ನರ್ಸರಿಯಲ್ಲಿ ಶುಕ್ರವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನೂರಾರು ಅರಣ್ಯ ದಿನಗೂಲಿ ಕಾರ್ಮಿಕರು ತಮ್ಮ ಜೀವನದ ಬಹುಪಾಲು ಆಲಮಟ್ಟಿಯಲ್ಲಿಯೇ ಕಳೆದಿದ್ದಾರೆ. ಕಾರ್ಖಾನೆ, ಗಣಿ, ವಿದ್ಯುತ್ ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಅಪಾಯವಿರುತ್ತದೆ. ಆದರೆ ನೀವು ನಿಸರ್ಗದೊಂದಿಗೆ ಕೆಲಸ ಮಾಡುತ್ತಿದ್ದು, ಅಪಾಯ ಕಡಿಮೆ, ಶ್ರಮ ಹೆಚ್ಚು” ಎಂದರು.
ಕಾರ್ಮಿಕ ಮುಖಂಡ ಹಾಗೂ ಅರಣ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಮಾದರ ಮಾತನಾಡಿ, “೧೯೯೫ಕ್ಕಿಂತ ಮುಂಚೆ ಆಲಮಟ್ಟಿಯಲ್ಲಿ ಗಿಡಗಳು, ಹಸಿರು ಅಪರೂಪವಾಗಿತ್ತು. ಈಗ ಸುಮಾರು ೧೫೦ಕ್ಕೂ ಹೆಚ್ಚು ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ಆಲಮಟ್ಟಿಯಲ್ಲಿ ಕಾಣುತ್ತೇವೆ. ವಿಜಯಪುರ ಜಿಲ್ಲೆಯಾದ್ಯಂತ ಹಸಿರೀಕರಣವಾಗಿದೆ. ಇದಕ್ಕೆಲ್ಲಾ ಕಾರಣ ಕಾರ್ಮಿಕರ ಅವಿರತ ಶ್ರಮ” ಎಂದರು.
ಸರ್ಕಾರ ನಿಗದಿಪಡಿಸಿದ ದಿನಕ್ಕೆ ೬೨೬ ರೂ. ವೇತನ ನೀಡಬೇಕು, ವಾರಕ್ಕೊಮ್ಮೆ ವೇತನ ಸಹಿತ ರಜೆ ಹಾಗೂ ಸರ್ಕಾರಿ ರಜೆ ದಿನಗಳಂದು ವೇತನ ನೀಡಬೇಕು ಎಂದು ಅವರು ಮನವಿ ಮಾಡಿದರು. ಕೆಲಸದ ಅಭಾವದಿಂದ ಕಾರ್ಮಿಕರ ಸಂಖ್ಯೆ ೨೫೦ಕ್ಕೆ ಇಳಿದಿದೆ ಎಂದು ವಿರೂಪಾಕ್ಷಿ ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯಾಧಿಕಾರಿ ರಮೇಶ ಚವ್ಹಾಣ, ಶಿವಾನಂದ ಜಿದ್ದಿಮನಿ, ಡಿವೈಆರ್‌ಎಫ್‌ಒ ಸತೀಶ ಗಲಗಲಿ, ಸಂತೋಷ ರಾಠೋಡ, ಅಶೋಕ ಮೇಲಿನಮನಿ, ಸಯ್ಯದ ಖರೋಳಿ, ಕಾರ್ಮಿಕ ಮುಖಂಡರಾದ ಬಸವರಾಜ ಗುಡಿಮನಿ, ಭೀಮಶಿ ಪವಾರ, ಸರೋಜಾ ಲಮಾಣಿ, ಆನಂದ ದುಲಾರಿ, ರುಕ್ಮಾ ಚವ್ಹಾಣ, ಲಕ್ಷ್ಮಣ ಬ್ಯಾಲಾಳ ಮತ್ತಿತರರು ಉಪಸ್ಥಿತರಿದ್ದರು.

