ಅಕ್ಕಮಹಾದೇವಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆತ್ಮರಕ್ಷಣಾ ತರಬೇತಿ ಶಿಬಿರಗಳು ಮಹಿಳೆಯರಿಗೆ ಅಗತ್ಯ ಕೌಶಲ್ಯ ಮತ್ತು ಆತ್ಮವಿಶ್ವಾಸ ನೀಡುತ್ತವೆ ಎಂದು ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಿಎಂ ಉಷಾ ಯೋಜನೆ ಅಡಿಯಲ್ಲಿ ‘ಆತ್ಮ ರಕ್ಷಣಾ ತರಬೇತಿ ಶಿಬಿರವನ್ನು’ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಹಿಳೆಯರು ಏಕಾಂಗಿಯಾಗಿ ಸಂಚರಿಸುವ ಸ್ವಾತಂತ್ರ‍್ಯವನ್ನು ಪಡೆದಿದ್ದರೂ, ಕೆಲ ಅಸಾಮಾಜಿಕ ಅಂಶಗಳು ಮತ್ತು ದುಷ್ಟರ ಕಾಟದಿಂದ ತಪ್ಪಿಸಿಕೊಳ್ಳಲು ಆತ್ಮರಕ್ಷಣಾ ತರಬೇತಿ ಶಿಬಿರಗಳು ಅತ್ಯಂತ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀಡುತ್ತವೆ. ಆದ್ದರಿಂದ ಇಂತಹ ತರಬೇತಿ ಶಿಬಿರಗಳು ಎಲ್ಲಾ ಮಹಿಳೆಯರಿಗೆ ದೊರೆಯುವಂತಾಗುವುದು ಅತ್ಯವಶ್ಯಕ. ಅಂದಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರು ಪ್ರೊ. ಹನುಮಂತಯ್ಯ ಪೂಜಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರಾದ ಡಾ. ಶ್ರೀನಿವಾಸ್, ಡಾ. ಕಿರಣ್, ಡಾ. ರಾಜಕುಮಾರ್ ಮಾಲಿಪಾಟೀಲ್ ಹಾಗೂ ಶಿಬಿರದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಿಯಾಂಕ ಕೋತ್ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಜ್ಯೋತಿ ಉಪಾಧ್ಯಾಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಎಂ.ಪಿ.ಈಡಿ ವಿದ್ಯಾರ್ಥಿನಿ ಅಶ್ವಿನಿ ನಿರೂಪಿಸಿದರು. ಅತಿಥಿ ಸಹಾಯಕ ನಿರ್ದೇಶಕ ಡಾ. ವಿಶ್ವನಾಥ್ ನಡಕಟ್ಟಿ ವಂದಿಸಿದರು.

