ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿನ ಪಿಡಿಓ ಹಾಗೂ ಆಡಳಿತಾಧಿಕಾರಿಗಳು ಬಿದ್ದ ಮನೆಗಳ ಸಮೀಕ್ಷೆ, ವಿಂಗಡಣೆ ಹಾಗೂ ಅಗತ್ಯ ಪರಿಹಾರಗಳಿಗೆ ಕ್ರಮವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜರುಗಿದ ಪ್ರವಾಹ ಹಾಗೂ ಮಳೆಯಿಂದಾದ ಹಾನಿಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡೋಣಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ಕ್ಷೇತ್ರದ ಬಹುತೇಕ ಗ್ರಾಮಗಳ ಜಮೀನುಗಳಲ್ಲಿನ ತೊಗರಿ, ಹತ್ತಿ, ಉಳ್ಳಾಗಡ್ಡಿ ಬೆಳೆಗಳು ನಾಶವಾಗಿವೆ. ಇವುಗಳ ಸಮೀಕ್ಷೆ ಕೈಗೊಳ್ಳಬೇಕು ಹಾಗೂ ಬೆಳೆವಿಮೆಯ ಕುರಿತು ಸಂಬಂಧಿಸಿದ ವಿಮಾ ಕಂಪನಿಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಜೊತೆಗೆ ಕಡ್ಲೇಬೀಜ ದಾಸ್ತಾನು ಹಾಗೂ ವಿತರಣೆ ಕುರಿತು ಕ್ರಮ ವಹಿಸಬೇಕು. ಜೊತೆಗೆ ಶಾಲೆಯ ಕೋಣೆಗಳ ಲಭ್ಯತೆ, ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಬೇಕು ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಣ್ಣ ಸಣ್ಣ ವಿಷಯಕ್ಕೂ ಶಾಸಕರಿಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಕುಂದುಕೊರತೆ ನಿವಾರಿಸಿ ಎನ್ನುವಂತಾಗಬಾರದು. ಅದಕ್ಕಾಗಿ ವಿಶೇಷವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಸಭೆಯಲ್ಲಿ ಗ್ರಾಮೀಣ ಭಾಗದ ಅದರಲ್ಲೂ ಡೋಣಿ ತೀರದಲ್ಲಿ ಪ್ರವಾಹದಿಂದ ಆದ ಬೆಳೆ ಹಾಗೂ ಕಟ್ಟಡಗಳ ಹಾನಿ, ತೋಟಗಾರಿಕಾ ಬೆಳೆಗಳ ಮಾಹಿತಿ, ರಸ್ತೆ, ಸೇತುವೆಗಳ ಸ್ಥಿತಿಗತಿ , ಜೆಜೆಎಮ್ ಕಾಮಗಾರಿ, ಹೆಸ್ಕಾಂ, ಸಣ್ಣ ನೀರಾವರಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ತಾವು ಕೈಗೊಂಡ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ದೇವರಹಿಪ್ಪರಗಿ ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಬಸವನಬಾಗೇವಾಡಿ ಇಓ ಪ್ರಕಾಶ ದೇಸಾಯಿ, ತಾಳಿಕೋಟೆ ತಹಶೀಲ್ದಾರ ಡಾ.ವಿನಯಾ ಹೂಗಾರ, ಎಚ್.ಎಮ್.ಸಾರವಾಡ, ಡಿ.ಎಸ್.ಭೋವಿ, ಡಾ.ಬಿ.ಎಸ್.ಕನಮಡಿ, ಡಿ.ಬಿ.ಕಲಬುರ್ಗಿ, ಶಿವಾನಂದ ಮೂಲಿಮನಿ, ಶಾಂತಗೌಡ ನ್ಯಾಮಣ್ಣವರ, ಪ್ರಶಾಂತ ಸಾನಿ,ಭೀಮರಾಯ ಸಾಗರ, ವ್ಹಿ.ಭೀ.ಗೊಂಗಡಿ, ಅರುಣಕುಮಾರ ನಡಗೇರಿ, ಸುಭಾಸ ಸಜ್ಜನ, ಡಾ.ರಮೇಶ ರಾಠೋಡ, ಎಸ್.ಬಿ.ಶಿರಗೂರ, ಎಚ್.ಕೆ.ಪಾಟೀಲ ಸಹಿತ ತಾಳಿಕೋಟಿ, ಬಸವನಬಾಗೇವಾಡಿ, ನಿಡಗುಂದಿ, ದೇವರಹಿಪ್ಪರಗಿ ತಾಲ್ಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು ಇದ್ದರು.

