ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಶಿಸ್ತುಕ್ರಮಕ್ಕೆ ಸೂಚನೆ
ದೇವರಹಿಪ್ಪರಗಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಪಟ್ಟಣದ ಇಂಗಳಗಿ ಕ್ರಾಸ್ ನಲ್ಲಿಯ ಮೊರಾರ್ಜಿದೇಸಾಯಿ ವಸತಿ ಶಾಲೆಗೆ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯ ನ್ಯೂನ್ಯತೆಗಳ ಪಟ್ಟಿ ಮಾಡಿ ಸಿಬ್ಬಂದಿಗೆ ಸುಧಾರಣೆ ಕುರಿತು ತಿಳುವಳಿಕೆ ನೀಡಿ ಮಾತನಾಡುತ್ತಾ, ಶಾಲೆಯ ಮಕ್ಕಳ ಪಾಲಕರ ದೂರುಗಳ ಅನ್ವಯ ಇಂದು ಶಾಲೆಗೆ ಭೇಟಿ ನೀಡಲಾಗಿದೆ.
ಶಾಲೆಯ ಆವರಣದಲ್ಲಿ ನಲ್ಲಿಗೆ ತೊಟೆಗಳಿರದೇ ನೀರು ಪೋಲಾಗುತ್ತಿರುವುದು, ರಾತ್ರಿ ಸಮಯದಲ್ಲಿ ವಿದ್ಯುತ್ ಕೈಕೊಟ್ಟಾಗ ಜನರೇಟರ್ ವ್ಯವಸ್ಥೆ ಇರದೇ ಇರುವುದು, ಜೊತೆಗೆ ರಾತ್ರಿ ಮಕ್ಕಳೊಂದಿಗೆ ವಾರ್ಡನ್ ಅಥವಾ ಯಾವುದೇ ಸಿಬ್ಬಂದಿ ಇರದೇ ಇರುವುದು, ಇದರಿಂದ ಮಕ್ಕಳಲ್ಲಿ ಭಯದ ವಾತಾವರಣ ಮೂಡುವಂತಾಗಿದ್ದು ಕೂಡಲೇ ಬೆಳಕಿನ ವ್ಯವಸ್ಥೆ ಮಾಡಬೇಕು.
ಶಾಲೆಯ ಪ್ರಾಚಾರ್ಯರ ಕೋಣೆಯಲ್ಲಿ ಲೈಟ್ ವ್ಯವಸ್ಥೆ ಇರದೇ ಇರುವುದು, ಸಿಸಿ ಕ್ಯಾಮೆರಾ, ದೂರುಪೆಟ್ಟಿಗೆ ಅಳವಡಿಸದೇ ಇರುವುದು, ವಾರ್ಡನ್ ಅವರಿಗೆ ಸ್ಟಾಕ್ ರಜಿಸ್ಟರ್ ತೋರುವಂತೆ ಕೇಳಿದ್ದರೂ ತೋರಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ಅವರ ಕುರಿತು ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿ ಇಲ್ಲಿರುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತ ಗುರುರಾಜ್ ಇಟ್ಟಗಿ, ಪ್ರಾಚಾರ್ಯ ರೇಷ್ಮಾ ಜಾಧವ, ನಿಲಯಪಾಲಕ ಎಂ.ಬಿ.ವಡಗೇರಿ, ಸಿಬ್ಬಂದಿಗಳಾದ ರಾಜಶೇಖರ ಕಂಬಾರ, ರಮೇಶ ತರಲಗಟ್ಟಿ, ಶ್ರೀಶೈಲ ನಾವಿ, ಮಧು, ಶೈಲಶ್ರೀ ನಾಯಕ, ಮಹೇಶ, ಶ್ರೀಶೈಲ ಉಮ್ಮರ್ಜಿ, ಲಕ್ಷ್ಮಿ ಹುಗ್ಗಿ, ರೇಖಾ ಎಚ್, ಶೋಭಾ ಕುಂಬಾರ ಸಂಜಯ ಗಚ್ಚಿನಕಟ್ಟಿ ಶ್ರೀಕಾಂತ ರಜಪೂರ ಸೇರಿದಂತೆ ಮಕ್ಕಳು ಇದ್ದರು.