ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಗ್ರಾಮ ಪಟ್ಟಣ ನಗರ ಸೇರಿದಂತೆ ದೇಶದ ಪ್ರತಿಯೊಂದು ಪ್ರಜೆಯು ನಿಸ್ವಾರ್ಥ ಮನೋಭಾವದಿಂದ ಸಂಘಟನಾತ್ಮಕವಾಗಿ ಉರಿಯುವ ದೀಪದಂತೆ ಸದಾ ಸೇವೆಯೆಂಬ ಯಜ್ಞದಲ್ಲಿ ತೊಡಗಿಕೊಳ್ಳುವ ಜಗತ್ತಿನ ಏಕೈಕ ಸಂಘಟನೆ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಿದೆ ಎಂದು ಮುಖ್ಯ ವಕ್ತಾರ ಜಿಲ್ಲಾ ಸಂಸ್ಕೃತ ಭಾರತದ ಅಧ್ಯಕ್ಷ ನೀಲಕಂಠ ವಾಲಿಕಾರ ಹೇಳಿದರು.
ಆರ್‌ಎಸ್‌ಎಸ್ ಸಂಘಟನೆಯು ಜನ್ಮತಾಳಿ ನೂರು ವರ್ಷದ ಸಂಭ್ರಮಾಚರಣೆ ಆಚರಿಸುತ್ತಿರುವ ಪ್ರಯುಕ್ತ ಕೊಲ್ಹಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪಟ್ಟಣದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಳ್ಳಿ ನಮ್ಮದು ದೇಶ ನಮ್ಮದು ಎಂದು ಪೂಜ್ಯ ಭಾವನೆಯಿಂದ ಹೆತ್ತ ತಾಯಿಯಂತೆ ನಿತ್ಯವೂ ಆರಾಧಿಸುವ ಒಂದು ದೈತ್ಯಪಡೆಯನ್ನು ಭರತಖಂಡ ಅಷ್ಟೇ ಅಲ್ಲದೇ ಜಗತ್ತಿನ ಮೂಲೆಮೂಲೆಯಲ್ಲಿ ಸ್ವಯಂ ಸೇವಕರನ್ನು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವಂಥಹ ಸಶಕ್ತ ಯುವಕರ ಹಿರಿಯರ ಮಹಿಳೆಯರ ಪಡೆಯನ್ನು ಕೊಟ್ಟಂತಹ ಸಂಘದ ಶಕ್ತಿ ಅಘಾದವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಐ.ಗೋಡ್ಯಾಳ ಮಾತನಾಡಿ, ಪ್ರತಿಯೊಂದು ಹಳ್ಳಿಗಳಲ್ಲಿ ಶಾಖಾ ನಡೆಸುವಂತಹ ಪ್ರಮುಖರನ್ನು ಸೃಷ್ಟಿ ಮಾಡಿ ವಿಶ್ವದಲ್ಲಿಯೇ ಸೇವೆಯಿಂದ ಗುರುತಿಸಿಕೊಂಡು ತನ್ನದೇ ಆದ ಯಾವುದೇ ಸಂಘಟನೆಗಳಲ್ಲಿ ಇಲ್ಲದಂತಹ ನಿಸ್ವಾರ್ಥ ಸೇವೆಯ ಗುರುತರ ಜವಾಬ್ದಾರಿಯನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಂತಹ ಡಾ.ಕೇಶವರಾವ್ ಹೆಡಗೆವಾರ್ ಅವರ ದೂರದೃಷ್ಟಿಯ ಫಲದಿಂದ ಇಂದು ಆರ್‌ಎಸ್‌ಎಸ್ ಸಂಘಟನೆ ಹೆಮ್ಮರವಾಗಿ ಬೆಳೆದಿದೆ ಎಂದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ೧೫೦ ಗಣವೇಷದಾರಿಗಳು ಕೊಲ್ಹಾರ ಮಂಡಲ ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಶ್ರೀಶೈಲ ಭಾರಸ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು, ಉದಯ ಆಲಗುಂಡಿ ಪ್ರಾರ್ಥನಾ ಗೀತೆ ಹೇಳಿದರು, ದುಂಡೇಶ ಗಣಿ ಗೀತೆ ಹಾಡಿದರು. ವಂದಣಾರ್ಪಣೆಯನ್ನು ಕುಮಾರ ಪಾಟೀಲ ಹೇಳಿದರು. ಶಿವು ನೆಟೆಕಟ್ಟಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.

