ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ಮರಣಶಕ್ತಿ ದುರ್ಬಲಗೊಳ್ಳುವ ಅಲ್ಝೈಮರ್ಸ್, ಡಿಮೆನ್ಷಿಯ ರೋಗದ ಪ್ರಮಾಣವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವೇಗವಾಗಿ ಹೆಚ್ಚುತಿದ್ದು, ಅಲ್ಝೈಮರ್ಸ್, ಡಿಮೆನ್ಷಿಯ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ ಗುಣಾರಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾಸ್ಪತ್ರೆ ಆವರಣದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ ವಿಶ್ವ ಆಲ್ಝೈಮರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಲ್ಝೈಮರ್ಸ, ಡಿಮೆನ್ಷಿಯ ಖಾಯಿಲೆಯಿಂದ ವಿಶ್ವದಲ್ಲಿ ೫೫ ಮಿಲಿಯನ್ ಜನ ಬಳಲುತ್ತಿದ್ದಾರೆ. ಸಮೀಕ್ಷೆ ಪ್ರಕಾರ ೨೦೩೦ರ ವರೆಗೆ ೭೮ ಮಿಲಿಯನ್ ಹಾಗೂ ೨೦೫೦ರ ಅಂತ್ಯಕ್ಕೆ ೧೩೯ ಮಿಲಿಯನ್ ಈ ಕಾಯಿಲೆಗೆ ಜನರು ಒಳಗಾಗಬಹುದಾಗಿದೆ ಎಂದು ಡಿಮೆನ್ಷಿಯ(ಆಲ್ಝೈಮರ್ಸ,) ನಿಯಂತ್ರಣ ಮತ್ತು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕಾಯಿಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮನೋರೋಗ ತಜ್ಞ ಡಾ. ನಾಗರಾಜ ಎಚ್ ಮಾತನಾಡಿ, ಡಿಮೆನ್ಷಿಯ ಕಾಯಿಲೆಯೂ ಮೆದುಳಿಗೆ ಸಂಬಂಧಿಸಿದ್ದಾಗಿದ್ದು, ಮೆದುಳಿನ ನರತಂತು ರಾಸಾಯನಿಕ ದ್ರವದಲ್ಲಿ ಆಗುವಂತಹ ವ್ಯತ್ಯಾಸಗಳಿಂದ ಬರುವಂತ ರೋಗವಾಗಿದೆ. ಇದು ವಯೋಸಹಜ ಕಾಯಿಲೆ ಆಗಿದ್ದು, ತಲೆಗೆ ಪೆಟ್ಟಾಗುವುದು, ಧೂಮಪಾನ ಹಾಗೂ ಮಧ್ಯವ್ಯಸನ, ಬಹುಕಾಲ ಅನಾರೋಗ್ಯದಿಂದ ಬಳಲುತ್ತಿರುವುದು ಇತ್ಯಾದಿ ಕಾರಣಗಳಿಂದ ಬರುತ್ತದೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಈ ಕಾಯಿಲೆಯಿಂದ ಗುಣಮುಖವಾಗಬಹುದು ಎಂದು ಅವರು ಹೇಳಿದರು.
ಮನೋರೋಗ ತಜ್ಞರಾದ ಡಾ.ಮಂಜುನಾಥ ಮಸಳಿ ಅವರು ಮಾತನಾಡಿ, ಎಲ್ಲಾ ರೀತಿಯ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಆಲ್ಝೈಮರ್ಸ (ಡಿಮೆನ್ಷಿಯ) ಕಾಯಿಲೆ ಬಗ್ಗೆ ಹಾಗೂ ಮೆದುಳು ಆರೋಗ್ಯದ ಬಗ್ಗೆ ಟೆಲಿ-ಮನಸ ಉಚಿತ ಸಹಾಯವಾಣಿ ಸಂಖ್ಯೆ:೧೪೪೧೬ಗೆ ಕರೆಮಾಡಿ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಶುಶ್ರೂಷ ಶಾಲೆಯ ಪ್ರಾಂಶುಪಾಲ ಡಾ. ಸರಸ್ವತಿ ಸಜ್ಜನ, ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹಣಮಂತಪ್ಪ ಹತ್ತರಕಿಹಾಳ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಓಂಕಾರ ತದ್ದೆವಾಡಿ, ಜಿಲ್ಲಾ ಮೇಲ್ವಿಚಾರಣಾಧಿಕಾರಿ ಮೋತಿಲಾಲ ಲಮಾಣಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಸಂಯೋಜಕ ಆನಂದ ರಾಠೋಡ ಸೇರಿದಂತೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಿಬ್ಬಂದಿ ವರ್ಗದವರು ಸರ್ಕಾರಿ ನರ್ಸಿಂಗ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

