ಮುದ್ದೇಬಿಹಾಳ: ಬರಗಾಲ ಪೀಡಿತ ತಾಲೂಕು ಘೋಷಣೆಯಾದ ಹಿನ್ನಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಗ್ರಾಮ ಪಂಚಾಯತಿ ಸಿದ್ಧವಾಗಿದೆ. ಗ್ರಾಮೀಣಾ ಪ್ರದೇಶ ಜನರಿಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗುವುದು. ಆದ್ದರಿಂದ ಉದ್ಯೋಗ ಚೀಟಿ ಹೊಂದಿದ ಕುಟುಂಬಗಳು ಬೇಡಿಕೆ ಅರ್ಜಿ ಸಲ್ಲಿಸಿ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ ಮಹಾಂತೇಶ ಕೋರಿ ಹೇಳಿದರು.
ತಾಲೂಕಿನ ಇಂಗಳಗೇರಿ ಗ್ರಾಮ ಪಂಚಾಯತಿಯಲ್ಲಿ ನಡೆದ ನರೇಗಾ ಯೋಜನೆಯ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದಡಿ ಗುರುವಾರ ವಿಶೇಷ ರೋಜಗಾರ ದಿವಸ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಕೂಲಿ ಪಾವತಿಯಾಗದೆ ನಿಷ್ಕ್ರಿಯಗೊಂಡಿರುವ ಉದ್ಯೋಗ ಚೀಟಿಗಳನ್ನು ಸಕ್ರಿಯ ಮಾಡಲು ಅವಕಾಶವಿದೆ. ಹೊಸ ಉದ್ಯೋಗ ಚೀಟಿ ಹೊಂದಲು ಇಚ್ಛಿಸುವವರು ನಮೂನೆ -೧ ರಲ್ಲಿ ತಮ್ಮ ಸ್ವ-ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ನರೇಗಾ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ ಮಾತನಾಡಿ, ದುಡಿಯುವ ಕೈಗಳಿಗೆ ಕೆಲಸ ಒದಗಿಸಲು ನರೇಗಾ ಯೋಜನೆಯಡಿ ಅವಕಾಶವಿದೆ. ಬಹತೇಕ ಗ್ರಾಮೀಣ ಜನರಿಗೆ ಯೋಜನೆಯ ಮಾಹಿತಿ ಕೊರತೆಯಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ಮನೆ-ಮನೆಗೂ ಯೋಜನೆಯ ಬಗ್ಗೆ ಮಾಹಿತಿ ನೀಡಿಲಾಗುತ್ತಿದೆ. ಉದ್ಯೋಗ ಖಾತ್ರಿ ನಡೆಗೆ ಸುಸ್ಥಿರತೆಯಡೆಗೆ ಅಭಿಯಾನ ಹಮ್ಮಿಕೊಂಡು ಯೋಜನೆ ಸಮರ್ಪಕ ಅನುಷ್ಟಾನಕ್ಕೆ ಒತ್ತು ನೀಡಲಾಗುವುದು. ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಜಮಲದಿನ್ನಿ ಗ್ರಾಮದ ೩೦ಕ್ಕೂ ಹೆಚ್ಚು ಕೂಲಿಕಾರರು ನರೇಗಾ ಯೋಜನೆಯಡಿ ಕೆಲಸ ಒದಗಿಸುವಂತೆ ಕೆಲಸದ ಬೇಡಿಕೆ ನಮೂನೆ-೬ ಅರ್ಜಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಾವಿತ್ರಿ ಸಾಸನೂರ, ಉಪಾಧ್ಯಕ್ಷೆ ಗುರುಸಿದ್ದಮ್ಮ ಹಾಗೂ ಸದಸ್ಯರಾದ ಸಿದ್ದಣ್ಣ ಮ.ಪಡೆಕನೂರ, ದಾದಾಪಟೇಲ್ ಬೇವಿನಗಿಡದ, ಪರಶುರಾಮ ಮಡಿಕೇಶ್ವರ, ಕಾರ್ಯದರ್ಶಿ ಬಿ.ಬಿ. ಬಿರಾದಾರ, ಡಿಇಒ ಎಸ್.ಐ.ಹೆಬ್ಬಾಳ ಇದ್ದರು.
Related Posts
Add A Comment