ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಹಾಗೂ ಬಸವನಬಾಗೇವಾಡಿ ವ್ಯಾಪ್ತಿಯಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗಿರುವ ಬೆಳೆ ಹಾನಿಯ ಪ್ರದೇಶಗಳಿಗೆ ಶನಿವಾರ ಸಂಜೆ ಅಪರಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ತಾಲೂಕಿನ ಯರನಾಳ, ಮನಗೂಳಿ ರೈತ ಬಾಂಧವರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತೊಗರಿ, ಮೆಕ್ಕೆಜೋಳ, ಹತ್ತಿ ಮತ್ತು ಈರುಳ್ಳಿ ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗುತ್ತಿದೆ. ಎಲ್ಲ ರೈತ ಬಾಂಧವರಿಗೂ ಬೆಳೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೆಪ್ಟಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿಯಾದ ತಾಲೂಕಿನ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡುತ್ತಿದ್ದಾರೆ. ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡಲಾಗುವುದು. ಬೆಳೆ ಹಾನಿಯಾದ ರೈತರು ಸಂಬಂಧಪಟ್ಟ ಗ್ರಾಮಾಡಳಿತಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ.ಪಾಟೀಲ, ಮನಗೂಳಿ ಕಂದಾಯ ನಿರೀಕ್ಷಕ ಸಂತೋಷ ಕುಂಟೋಜಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಚಿದಾನಂದ ಹಿರೇಮಠ, ಎಸ್.ಎಫ್.ಖಾದ್ರಿ, ಬಿ.ಎಸ್.ಸಕ್ರಿ, ತೋಟಗಾರಿಕೆಯ ಇಲಾಖೆಯ
ರಾಘವೇಂದ್ರ ಬಗಲಿ, ಗ್ರಾಮಾಡಳಿತಾಧಿಕಾರಿ ಸಿದ್ರಾಮ ಶಿರಶ್ಯಾಡ ಇತರರು ಇದ್ದರು.

