ನವರಾತ್ರಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರೊ:ಎಂ.ಎಸ್.ಖೊದ್ನಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆಡುಕಿನ ವಿರುದ್ದ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ದುರ್ಗಾದೇವಿಯು ಒಂಬತ್ತು ದಿನಗಳವರೆಗೆ ಶಕ್ತಿಯ ಆರಾಧನೆ ಮಾಡುವ ಮತ್ತು ದೇವಿಯು ಜಗತ್ತಿನಲ್ಲಿ ದುಷ್ಟರ ಸಂಹಾರ ಮಾಡಿ, ಶಿಷ್ಟರ ರಕ್ಷಣೆಗಾಗಿ ನವಶಕ್ತಿ ಅವತಾರಗಳನ್ನು ತಾಳುತ್ತಾಳೆ ಎಂಬ ಪ್ರತೀತಿಯಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡಿ, ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ: ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತ: ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಈ ಹಬ್ಬದ ಪ್ರಯುಕ್ತ ಸುಮಂಗಲೆಯರು ಪ್ರತಿ ದಿನ ಮುಂಜಾವಿನ ಸಮಯದಲ್ಲಿ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸುವುದು, ಪ್ರತಿ ಮನೆಯಲ್ಲೂ ಒಂಬತ್ತು ದಿನಗಳ ಪರ್ಯಂತ ದೀಪ ಹಾಕುವುದು, ಘಟಸ್ಥಾಪನೆ ಮಾಡುವುದು ಹೀಗೆ ಆದಿಶಕ್ತಿಯನ್ನು ಆರಾಧಿಸುವ ಪವಿತ್ರ ಮತ್ತು ವಿಶಿಷ್ಟವಾದ ಹಬ್ಬ ಇದಾಗಿದೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮ ಮಕ್ಕಳಲ್ಲಿ ದೇಶೀಯ ಧಾರ್ಮಿಕ-ಸಾಮಾಜಿಕ ಸಂಸ್ಕೃತಿ-ಸಂಸ್ಕಾರಗಳನ್ನು ಒಡಮೂಡುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಅಂದಾಗ ಮಾತ್ರ ಮುಂದಿನ ಜನಾಂಗ ನಮ್ಮ ಧಾರ್ಮಿಕ ಸಂಪ್ರದಾಯ-ಪದ್ಧತಿ, ಸಂಸ್ಕೃತಿ, ಆಚರಣೆ ಮತ್ತು ವಿಧಿವಿಧಾನಗಳನ್ನು ಅನುಸರಿಸಿಕೊಂಡು ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ದೇವಸ್ಥಾನ ಸೇವಾ ಸಮೀತಿಯ ಅಧ್ಯಕ್ಷ ಸಂತೋಷ ಪಾಟೀಲ ಅವರು ಮಾತನಾಡಿ, ಈ ದೇವಸ್ಥಾನದಲ್ಲಿ ನಮ್ಮ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಿರಿಯರು ನಮಗೆ ಬಳುವಳಿಯಾಗಿ ನೀಡಿದ ಪುರಾತನ ಮತ್ತು ಹಿಂದೂ ಧರ್ಮದ ಸಂಸ್ಕೃತಿ-ಸಂಪ್ರದಾಯಗಳನ್ನು ಮರೆಯದೇ ಮುಂದುವರೆಸಿಕೊಂಡು ಹೋಗಬೇಕಾಗಿರುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಿದ್ದಮ್ಮ ಪಾಟೀಲ, ರೇವತಿ ಬುದ್ನಿ, ಭಾರತಿ ಬಿರಾದಾರ, ಅಂಬಿಕಾ ರಜಪೂತ, ಶ್ರೀದೇವಿ ಖೊದ್ನಾಪೂರ, ಜ್ಯೋತಿ ಪಾಟೀಲ, ಪ್ರೇಮಾ ಕನ್ನೂರ, ಸರೋಜಿನಿ ಬಿರಾದಾರ, ಮಾಧುರಿ ದೇಶಪಾಂಡೆ, ಮಹಾಂತೇಶ್ವರಿ ಪಾಟೀಲ, ಮಂಜುಳಾ ಕವಲಗಿ ಇನ್ನಿತರರು ಸೇರಿದಂತೆ ನೂರಾರು ಸುಮಂಗಲೆಯರು ಭಾಗವಹಿಸಿದ್ದರು.

