ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಒಳ್ಳೆಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶನಿವಾರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸಹಕಾರಿ ಸೌಧ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮತ್ತು ಹೈನುಗಾರಿಕೆ, ಕುರಿಸಾಕಾಣಿಕೆ, ದ್ರಾಕ್ಷಿ ಬೆಳೆ ಸಾಲ, ತೋಟದ ಮನೆ ನಿರ್ಮಾಣಕ್ಕೆ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಸಹಿತ ವಿವಿಧ ಸಾಲಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆದ ರೈತರು ಆರ್ಥಿಕ ಅಭಿವೃದ್ಧಿ ಸಾಧಿಸಿ ಪುನಃ ಸಂಘದಲ್ಲಿ ಹೆಚ್ಚು ಠೇವಣಿ ಇಡುವಂತೆ ಸದೃಡರಾಗಬೇಕೆಂದು ಹೇಳಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವರು ತಿಳಿಸಿದ ಎಲ್ಲ ಸಾಲಸೌಲಭ್ಯಗಳನ್ನು ಸಂಘದಿAದ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಿ ಸಂಘದ ಮುನ್ನಡೆಗೆ ಸಹಕರಿಸಬೇಕೆಂದು ವಿನಂತಿಸಿ ಆಶೀರ್ವಚನ ನೀಡಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಮುನ್ನಡೆದು “ಅ” ವರ್ಗದ ಪ್ರಗತಿಯಲ್ಲಿ ಇರುವುದನ್ನು ತಿಳಿಸಿದರು.
ಆರ್.ಎಮ್.ಬಣಗಾರ, ಎಸ್.ಬಿ.ಹೊಸಮನಿ, ಎಸ್.ಎ.ಪವಾರ, ಶಿವಪ್ಪ ಅವಟಿ, ಆಯ್.ಎಲ್. ಶಾಬಾದಿ, ಭೀಮನಗೌಡ ಲಚ್ಯಾಣ, ಎಸ್.ಬಿ.ಉತ್ನಾಳ ಸಹಿತ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸರ್ವಸದಸ್ಯರು , ಗ್ರಾಮಸ್ಥರು ಇದ್ದರು.

