ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಇಂದು ಭೀಮಾ ನದಿಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.
ಆಲಮೇಲ ತಾಲೂಕಿನ ದೇವಣಗಾಂವ, ಕುಮಸಗಿ
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ಅವರು, ಅಲ್ಲಿನ ಸಂತ್ರಸ್ಥರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದ್ದು, ಯಾವುದೇ ಜನ ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಂತ್ರಸ್ತರಿಗೆ ಊಟೋಪಚಾರ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಮಸಗಿ ಗ್ರಾಮದ ಹತ್ತಿರ ಹರಿಯುವ ಭೀಮಾ ನದಿ ತೀರಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯ ಕುರಿತು ಅವಲೋಕಿಸಿದರು.
ದೇವಣಗಾಂವ ಗ್ರಾಮದ ಸಮೀಪ ಇರುವ ದೇವಣಗಾವ ಸೇತುವೆಗೆ ಭೇಟಿ ನೀಡಿ ನದಿಯ ಮೇಲಿನಿಂದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು ಜೊತೆಗೆ ದೇವಣಗಾಂವ ಭೀಮಾ ನದಿಯ ಸೇತುವೆಯ ರಿಪೇರಿಯ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೇವಣಗಾಂವದಿಂದ ಆಲಮೇಲಕ್ಕೆ ಸಂಪರ್ಕಿಸುವ ರಸ್ತೆಯ ದುರಸ್ತಿಯ ಕುರಿತು ಗ್ರಾಮಸ್ಥರು ಮನವಿ ಮಾಡಿದಾಗ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ., ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ವಿಡಿಯೋ ಸಂಜೀವ್ ಕುಮಾರ್ ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

