ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟಿದೆ, ಅಂದಾದುಂದಿ ಸರ್ಕಾರ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.
ಭಾನುವಾರ, ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯಾದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದೆ. ಬೆಂಗಳೂರಿನ ಹದಗೆಟ್ಟ ರಸ್ತೆ ಸಮಸ್ಯೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಬಾಗಲಕೋಟೆಯಿಂದ ಆಲಮಟ್ಟಿಗೆ ಬರಬೇಕಾದರೂ ರಸ್ತೆ ತುಂಬಾ ತಗ್ಗು ದಿನ್ನೆಗಳು ಎಂದು ಶೆಟ್ಟರ್ ಆರೋಪಿಸಿದರು.
ಗುತ್ತಿಗೆದಾರ ಸಂಘದವರು ಬಿಜೆಪಿ ಸರ್ಕಾರವಿದ್ದಾಗಕ್ಕಿಂತಲೂ ಎರಡು ಪಟ್ಟು ಹೆಚ್ಚು ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದು ಆರೋಪಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶೇ ೪೦ ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳಿ, ಅದಕ್ಕೆ ಹೋರಾಟ ರೂಪಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಇಂತಹ ಆರೋಪ ಕಾಂಗ್ರೆಸ್ ಸರ್ಕಾರಕ್ಕೂ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಮಾಡಿದ ಆರೋಪದ ತನಿಖೆ ಕಾಂಗ್ರೆಸ್ ಸರ್ಕಾರ ಕೈಗೊಂಡರೂ ಅದು ಸಾಬಿತಾಗಲಿಲ್ಲ ಎಂದರು.
ಈಗ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳುತ್ತಿರುವುದು ಈ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಉದಾಹರಣೆ ಎಂದರು.
ಸಾಕಷ್ಟು ಕಡೆ ವ್ಯಾಪಕ ಮಳೆಯಾಗಿ ನೆರೆ ಹಾವಳಿ ಸಂಭವಿಸಿ, ನೂರಾರು ಮನೆಗಳು ಬಿದ್ದು, ಸಹಸ್ರಾರು ಎಕರೆ ಭೂಮಿ ಜಲಾವೃತಗೊಂಡಿದೆ. ಇಂತಹ ಸ್ಥಿತಿಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ, ಸಂತ್ರಸ್ತರ ಕಣ್ಣೊರೆಸುವ ಪ್ರಯತ್ನ ಮಾಡಿಲ್ಲ, ಸರ್ಕಾರದಿಂದ ಪರಿಹಾರವನ್ನು ನೀಡಿಲ್ಲ ಎಂದರು.
೨೦೨೬ ರಲ್ಲಿ ಕೇಂದ್ರ ಸರ್ಕಾರ ಜನಗಣತಿಯ ಜತೆಗೆ ಜಾತಿ ಗಣತಿಯೂ ಮಾಡುತ್ತದೆ ಎಂದು ಘೋಷಿಸಿದರೂ, ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಹೆಸರಲ್ಲಿ ಜಾತಿ ಗಣತಿ ಮಾಡುತ್ತಿದೆ, ಇದು ಹಿಂದೂಗಳನ್ನು ಒಡೆಯುವ ಹುನ್ನಾರವಾಗಿದ್ದು, ಅದಕ್ಕಾಗಿ ಜನರ ೪೫೦ ಕೋಟಿ ರೂ ತೆರಿಗೆ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ ಎಂದರು.
ಗಣತಿ ಮಾಡುವವರಿಗೆ ಸೂಕ್ತ ಸೌಲಭ್ಯ ಒದಗಿಸಿಲ್ಲ, ಸಾಕಷ್ಟು ತಾಂತ್ರಿಕ ತೊಂದರೆಯಿಂದಾಗಿ ಗಣತಿ ಮಾಡುವ ಶಿಕ್ಷಕರು ಪರಿತಪಿಸುತ್ತಿದ್ದಾರೆ. ಪೂರ್ಣಗೊಂಡಿರುವ ಆಲಮಟ್ಟಿಯ ವಾಟರ್ ಪಾರ್ಕ್ ಉದ್ಘಾಟನೆಗೂ ಸಂಬಂಧಿಸಿದ ಸಚಿವರಿಗೆ ಸಮಯ ಸಿಕ್ತಾಯಿಲ್ಲ ಎಂದು ಆರೋಪಿಸಿದರು.
೭೫ ವರ್ಷ ವಯಸ್ಸಿನವರು ರಾಜಕೀಯ ನಿವೃತ್ತಿಗೊಳ್ಳಲಿದ್ದಾರೆ ಎಂದು ಬಿಜೆಪಿಯ ಸಂವಿಧಾನದಲ್ಲಿ ಉಲ್ಲೇಖವಿಲ್ಲ, ಪ್ರಧಾನಿಗಳು ಯಾವುದೇ ಕಾರಣಕ್ಕೂ ನಿವೃತ್ತಿಯಾಗುವುದಿಲ್ಲ. ೨೦೪೭ ಕ್ಕೆ ವಿಕಸಿತ ಭಾರತ ಎಂದು ಘೋಷಣೆಯಾಗಿದೆ. ಅಲ್ಲಿಯವರೆಗೂ ದೇಶದಲ್ಲಿ ಮೋದಿಯವರೇ ಪ್ರಧಾನಿಯಾಗಿರಲಿದ್ದಾರೆ ಎಂದರು.

