ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು. ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಗುಂದಗಿ ಫಂಕ್ಷನ್ ಹಾಲಿನಲ್ಲಿ ಕರ್ನಾಟಕ ರಾಜ್ಯ ಪೌರ ನೌಕರ ಸಂಘದ ವತಿಯಿಂದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗಲು ರಾತ್ರಿ ಎನ್ನದೇ, ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೇ ದುಡಿಯುತ್ತಿರುವ ಇವರು ಕಠಿಣ ಪರಿಶ್ರಮ ಜೀವಿಗಳು. ಇವರ ಸಮರ್ಪಣಾ ಭಾವಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ತಮಗಿರುವ ಕಷ್ಟವನ್ನು ನುಂಗಿ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದಾಗಿದೆ. ಸಿಂದಗಿ ನಗರದ ಕಾರ್ಮಿಕ ಕುಟುಂಬ ಫಲಾನುಭವಿಗಳಿಗೆ ೪೭ನಿವೇಶನಗಳನ್ನು ನೀಡಲಾಗಿದೆ. ಈಗಿರುವ ೭ಲಕ್ಷದ ೫೦ಸಾವಿರ ರೂಪಾಯಿ ಹಣವನ್ನು ಮನೆ ಕಟ್ಟಿಕೊಳ್ಳಲು ಸಾಲುವದಿಲ್ಲವೆಂದು ಅದನ್ನು ೧೫ ಲಕ್ಷಕ್ಕೆ ಹೆಚ್ಚಿಸಲು ಸಂಬಂಧಿಸಿದ ಸಚಿವರಿಗೆ ವಿನಂತಿಸಲಾಗಿದೆ ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ದೇಶದ ಜನರು ಬೆಚ್ಚನೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಜನರು ಕಣ್ಣು ಬಿಡುವ ಮುನ್ನ ತಮ್ಮ ಕೆಲಸ ಮುಗಿಸುವ ತರಾತುರಿಯಲ್ಲಿರುತ್ತಾರೆ. ಆದರೆ ಪೌರ ಕಾರ್ಮಿಕರಿಗೆ ಸಲ್ಲಬೇಕಾದ ಸೌಕರ್ಯಗಳು ಇನ್ನು ಸರ್ಕಾರಗಳಿಂದ ಆಗಬೇಕಿದೆ. ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಗ್ರಾಮ ಮತ್ತು ನಗರಗಳ ಬೆಳವಣಿಗೆಗೂ ಕಾರಣವಾಗುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಹಾಗೂ ಪುರಸಭೆಯ ಎಲ್ಲ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ಸ್ವಾಗತಿಸಿದರು. ಶಿಕ್ಷಕ ಸಿದ್ಧಲಿಂಗ ಚೌಧರಿ ನಿರೂಪಿಸಿ ವಂದಿಸಿದರು. ರಾಜಶೇಖರ್ ಅಲ್ದಿ ಪ್ರಾರ್ಥಿಸಿದರು.
ಈ ವೇಳೆ ರಾಜ್ಯ ಪೌರ ನೌಕರ ಸಂಘದ ಜಿಲ್ಲಾಧ್ಯಕ್ಷ ಅಬ್ಬಾಸಲಿ ಕಾಖಂಡಕಿ, ತಾಲೂಕ ಅಧ್ಯಕ್ಷ ಕಲ್ಲಪ್ಪ ಚೌರ, ಕಾರ್ಯದರ್ಶಿ ನಬಿರಸೂಲ ಉಸ್ತಾದ, ನೂರಅಹ್ಮದ ಅತ್ತಾರ, ಪುರಸಭೆ ಸದಸ್ಯರಾದ ಭಾಷಾಸಾಬ ತಾಂಬೋಳಿ, ಹಾಸಿಂಪೀರ ಆಳಂದ, ರಾಜಣ್ಣ ನಾರಾಯಣಕರ, ಬಸವರಾಜ ಸಜ್ಜನ್, ಉಮಾದೇವಿ ಸುಲ್ಪಿ, ಸಿದ್ದು ಮಲ್ಲೇದ, ಸಾಯಿಬಣ್ಣ ಪುರದಾಳ, ಸದಾನಂದ ಕುಂಬಾರ, ಚೆನ್ನಪ್ಪ ಗೋಣಿ, ಅಬ್ದುಲರಹಿಮ ದುದುನಿ, ಭೀಮಾಶಂಕರ್ ರೋಡಗಿ, ರಾಜು ಖೇಡ, ಮಲ್ಲು ಸದುಗೋಳ ಸೇರಿದಂತೆ ಇತರರು ಇದ್ದರು.

