ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ವಾಭಾವಿಕವಾಗಿ ಉಜನಿ ಆಣೆಕಟ್ಟಿನಿಂದ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಆಗುತ್ತಿತ್ತು. ಆದರೆ ಈ ಬಾರಿ ಸಿನಾ ಬೆಸನ್‌ನಲ್ಲಿ ಸುಮಾರು ೩ಲಕ್ಷ ೫೦ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ತೀವ್ರವಾದ ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹವಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತ, ತಾಲೂಕಾಡಳಿತ ಕೈಗೊಂಡು ನೆರೆ ಸಂತ್ರಸ್ತರಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ ಮತಕ್ಷೇತ್ರದ ಆಲಮೇಲ ತಾಲೂಕಿನ ಕುಮಸಗಿ ಹಾಗೂ ದೇವಣಗಾಂವ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಂತ್ರಸ್ತರಿಗೆ ಧೈರ್ಯ ತುಂಬಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಸಗಿ ಗ್ರಾಮದಲ್ಲಿ ಸುಮಾರು ೧೦೦ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಅವರಿಗೆ ಸ್ಥಳಾಂತರದ ವ್ಯವಸ್ಥೆ ಮಾಡಲಾಗುವುದು. ಪ್ರತಿ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಒಪ್ಪಿಕೊಳ್ಳುತ್ತಾರೆ. ಮಳೆ ಕಡಿಮೆಯಾದ ಮೇಲೆ ಮತ್ತೆ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ. ಈ ಬಾರಿ ೧೦೦ಕುಟುಂಬಗಳು ನಿಶ್ಚಿತವಾಗಿ ಸ್ಥಳಾಂತರವಾಗುತ್ತೇವೆ ಎಂದು ಹೇಳಿದ್ದಾರೆ. ಸರಕಾರಿ ಜಾಗವಿಲ್ಲ. ಸರಕಾರದಿಂದ ಜಿಲ್ಲಾಡಳಿತ ಒಪ್ಪಿಗೆಯನ್ನು ಪಡೆದುಕೊಂಡು ನೇರವಾಗಿ ಜಿಲ್ಲಾಡಳಿತ ಪರವಾನಿಗೆ ಪಡೆದು ೫ಎಕರೆ ಭೂಮಿ ಖರೀದಿ ಮಾಡಿ ನಿರಾಶ್ರಿತರಿಗೆ ನಿವೇಶನ ನೀಡುವ ವ್ಯವಸ್ಥೆಯನ್ನು ಶಾಸಕರು ಮತ್ತು ನಾನು ಒದಗಿಸುವ ದಿಸೆಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ.
ದೇವಣಗಾಂವ ಸೇತುವೆ ೧೯೭೨ರಲ್ಲಿ ನಿರ್ಮಾಣವಾಗಿದ್ದು, ಇದೀಗ ಶಿಥಿಲಾವಸ್ಥೆಗೊಂಡಿದ್ದು, ಅದನ್ನು ಬಲಪಡಿಸುವುದಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಮಸಗಿಯಿಂದ ಬರುವ ರಸ್ತೆಯಲ್ಲಿ ಎರಡು ಸೇತುವೆಯಾಗಬೇಕು ಎನ್ನುವ ಬೇಡಿಕೆಯಿದೆ. ತೊಗರಿ, ಹತ್ತಿ, ಈರುಳ್ಳಿ ೧೦೦ಕ್ಕೆ ೧೦೦ರಷ್ಟು ಹಾಳಾಗಿದೆ. ಕಬ್ಬು ಶೇ.೫೦ರಷ್ಟು ಹಾಳಾಗಿದೆ. ಅಂದಾಜು ೧ಲಕ್ಷ ೩೮ಸಾವಿರ ಹೆಕ್ಟರ್ ಬೆಳೆ ಹಾಳಾಗಿದ್ದು, ೪ಲಕ್ಷ ಎಕರೆ ಬೆಳೆ ನಾಶವಾಗಿದೆ. ಎಲ್ಲವನ್ನು ಸಮಗ್ರವಾಗಿ ಸಮೀಕ್ಷೆ ಮಾಡಿ, ಪರಿಹಾರ ನೀಡುವ ಕಾರ್ಯ ರಾಜ್ಯ ಸರಕಾರ ಮಾಡುತ್ತದೆ. ಆದಷ್ಟು ಬೇಗ ಸಿಎಂ ಮತ್ತು ಕಂದಾಯ ಸಚಿವರ ಜೊತೆ ಚರ್ಚಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು. ಯಾರು ಭಯ ಪಡುವ ಅಗತ್ಯವಿಲ್ಲ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಕೆ.ಆನಂದ, ಜಿಲ್ಲಾ ಪಂಚಾಯತ ಸಿಇಒ ರಿಷಿ ಆನಂದ, ಸಿಂದಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಆಲಮೇಲ ತಾಪಂ ಅಧ್ಯಕ್ಷ ಸಾದಿಕ ಸುಂಬಡ, ಚನ್ನು ವಾರದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕರು ಇದ್ದರು.

