ಬೆಂಗಳೂರಿನಲ್ಲಿ ಹಿರಿಯ ಸಾಹಿತಿ ಪ್ರೊ:ಎಸ್.ಜಿ.ಸಿದ್ಧರಾಮಯ್ಯ ಅಬಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಹಾಗೂ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಕನ್ನಡ ಭಾಷಾ ವಿಭಾಗದ ಸಹಯೋಗದಲ್ಲಿ ಬೆಂಗಳೂರಿನ ಜಯನಗರದ ೯ ನೇ ಬಡಾವಣೆಯಲ್ಲಿರುವ ಜೆ ಜಿ ಐ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಹಲಸಂಗಿ ಗೆಳಯರ ಬದುಕು ಮತ್ತು ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜರುಗಿತು.
ಈ ಕಾರ್ಯಕ್ರಮವನ್ನು ನಾಡಿನ ಹಿರಿಯ ಸಾಹಿತಿ ಪ್ರೊ.ಎಸ್ ಜಿ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿ, ಹಲಸಂಗಿ ಗೆಳೆಯರ ಬಳಗವು ಕನ್ನಡ ನವೋದಯ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇಯಾದ ವಿಶೇಷ ಕೊಡುಗೆ ನೀಡಿದ್ದು, ಜನಪದ ಸಾಹಿತ್ಯ ಮತ್ತು ದೇಸಿ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಹಲಸಂಗಿ ಗೆಳೆಯರು ಅದರಲ್ಲೇ ಸಾಹಿತ್ಯ ಕೃಷಿ ಮಾಡಿದವರು. ಇನ್ನು ಗೆಳೆಯರ ಬಳಗದ ಅತ್ಯದ್ಭುತ ಕೆಲಸವೆಂದರೇ ಅದು ಜನಪದ ಗೀತೆಗಳ ಸಂಗ್ರಹ.ಅದರಲ್ಲೂ ಗರತಿಯ ಹಾಡುಗಳು ಅದ್ವಿತೀಯ ಸಂಗ್ರಹವಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲೆ, ಸಾಹಿತ್ಯ, ಜಾನಪದ ಹಾಗೂ ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರ ಹೆಸರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಟ್ರಸ್ಟ್ಗಳನ್ನು ರಚನೆ ಮಾಡಿದೆ, ಆದರೆ ಗೆಳೆಯರ ಬಳಗದ ಹೆಸರಿನಲ್ಲಿರುವ ಸ್ಥಾಪಿಸಿರುವ ಏಕಮಾತ್ರ ಟ್ರಸ್ಟ್ ಹಲಸಂಗಿ ಗೆಳೆಯರ ಪ್ರತಿಷ್ಠಾನವಾಗಿದ್ದು, ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೈನ್ (ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಪ್ರಾಧ್ಯಾಪಕರಾದ ಡಾ.ರಾಜಕುಮಾರ ಬಡಿಗೇರ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ಎಂ ಕೆ ಶ್ರೀಧರ್ ಮಾತನಾಡಿದರು.ವಿಜಯಪುರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು.
ಪ್ರತಿಷ್ಠಾನದ ಸದಸ್ಯೆ ಶ್ರೀಮತಿ ದಾಕ್ಷಾಯಣಿ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಶ್ರೀಮತಿ ರಾಜೇಶ್ವರಿ ವೈ ಎಂ,ಮಧುರ ಚೆನ್ನರ ಮೊಮ್ಮಕ್ಕಳಾದ ಜಯಶ್ರೀ ಗಲಗಲಿ, ಸತ್ಯವತಿ ಗಲಗಲಿ ಹಾಗೂ ಸಿಂಪಿ ಲಿಂಗಣ್ಣನವರ ಮೊಮ್ಮಕ್ಕಳಾದ ಸ್ನೇಹಲತಾ, ಮರಿ ಮೊಮ್ಮಗಳಾದ ರೋಹಿಣಿ ,ಕೆ ಎಸ್ ನರಸಿಂಹಸ್ವಾಮಿಯವರ ಮೊಮ್ಮಗಳಾದ ಡಾ.ಮೆಖಲಾ ವೆಂಕಟೇಶ್ ಮತ್ತು ಕುಟುಂಬದವರು ಹಾಗೂ ವಿಶ್ವ ವಿದ್ಯಾಲಯದ ವಿವಿಧ ವಿಭಾಗದ ಪ್ರಾಧ್ಯಾಪಕರು,
ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತ್ರಿಷಾ ಹಾಗೂ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

