ಸಿಂದಗಿಯಲ್ಲಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬನ್ನೆಟ್ಟಿ ಪಿಎ ಗ್ರಾಮದ ಪರಿಶಿಷ್ಟ ಜಾತಿಯ ಮಹಾದೇವಪ್ಪ ಪೂಜಾರಿ (ಹರಿಜನ) ಕೊಲೆಗೆ ಸಂಬಂಧಿಸಿದಂತೆ ಆರೋಪಿ ಯಾರೆ ಆಗಿರಲಿ, ಎಷ್ಟೇ ಪ್ರಭಾವಿಯಾಗಿರಲಿ ತೀವ್ರ ಗತಿಯಲ್ಲಿ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ ನೀಡಿದರು.
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬನ್ನೆಟ್ಟಿ ಪಿಎ ಗ್ರಾಮದ ಪರಿಶಿಷ್ಟ ಜಾತಿಯ ವ್ಯಕ್ತಿಯ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಪ್ರಕರಣವು ತನಿಖೆಯ ಹಂತದಲ್ಲಿದೆ. ಹೋರಾಟಗಾರರು ಆರೋಪಿಸುತ್ತಿರುವಂತೆ ಇಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ನ್ಯಾಯ ಸಮ್ಮತವಾದ ತನಿಖೆ ನಡೆಸಲಾಗುತ್ತಿದೆ. ಮೃತ ವ್ಯಕ್ತಿಯ ಶವವು ಕೊಳೆತ ಸ್ಥಿತಿಯಲ್ಲಿ ದೊರಕಿದಾಗ ವೈಜ್ಞಾನಿಕ ಪರೀಕ್ಷೆಗೊಳಪಡಿಸಿದಾಗ ತಲೆಗೆ ಬಲವಾದ ಗಾಯ ಹಾಗೂ ಶರೀರದ ಮೇಲೂ ಗಾಯವಾಗಿರುವುದು ಗಮನಕ್ಕೆ ಬಂದಾಗ ಇದೊಂದು ಕೊಲೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಯಿತು.
ಎಲ್ಲ ಕೊಲೆ ಪ್ರಕರಣಗಳು ಒಂದೆ ತೆರನಾಗಿ ಇರುವುದಿಲ್ಲ, ಪ್ರತಿಯೊಂದಕ್ಕೂ ವಿವಿಧ ಆಯಾಮಗಳಿರುತ್ತವೆ. ಅವುಗಳ ಆಧಾರದ ಮೇಲೆ ತನಿಖೆ ಮಾಡುವಾಗ ವಿಳಂಬವಾಗುವುದು ಸಹಜ. ನ್ಯಾಯಾಲಯ ನೀಡಿದ ದಿನಾಂಕ ಮತ್ತು ಅವಧಿಗಳು ಎಫ್‌ಎಸ್‌ಎಲ್ ವರದಿಗಳು ನೀಡಲು ತೆಗೆದುಕೊಂಡ ಕಾಲಾವಕಾಶದ ಮೇಲೆ ಒಂದು ಪ್ರಕರಣ ಇತ್ಯರ್ಥವಾಗುವ ಕಾಲಾವಕಾಶ ನಿರ್ಧಾರವಾಗುತ್ತದೆ. ಹಾಗಾಗಿ ಈ ಪ್ರಕರಣ ಒಂದು ಹಂತಕ್ಕೆ ಬರಲು ೧೫ ದಿವಸಗಳಾಗಬಹುದು ಅಥವಾ ನಾಲ್ಕಾರು ತಿಂಗಳುಗಳಷ್ಟು ಸಮಯವನ್ನಾದರು ತೆಗೆದುಕೊಳ್ಳಬಹುದು. ಹೋರಾಟ ಮಾಡಿದರೇನೆ ನ್ಯಾಯ ಸಿಗುತ್ತದೆ ಎನ್ನುವ ಭಾವನೆ ಇಟ್ಟುಕೊಳ್ಳದೇ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಟ್ಟು ಹೋರಾಟವನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.
ಈ ವೇಳೆ ರಾಜ್ಯ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಚಂದ್ರಕಾಂತ ಸಿಂಗೆ, ಶರಣು ಸಿಂಧೆ, ಅಶೋಕ ಛಲವಾದಿ, ಶ್ರೀನಿವಾಸ ಓಲೇಕಾರ, ಪ್ರಕಾಶ ಗುಡಿಮನಿ, ಸುಭದ್ರಾ ಮೇಲಿನಮನಿ ಮಾತನಾಡಿ, ಹಲವಾರು ಬಾರಿ ಸಂಶಯಾಸ್ಪದ ವ್ಯಕ್ತಿಗಳ ಹೆಸರುಗಳನ್ನು ಇಲಾಖೆಗೆ ತಿಳಿಯ ಪಡಿಸಲಾಗಿದ್ದರೂ ಇಲಾಖೆ ಕ್ರಮಕೈಗೊಂಡಿಲ್ಲ. ಇಲಾಖೆಯ ಮೇಲೆ ಅಥವಾ ಇನ್ನಾರನ್ನು ಗುರಿಯಾಗಿಟ್ಟುಕೊಂಡು ಹೋರಾಟ ಮಾಡುತ್ತಿಲ್ಲ. ಬಡ ದಲಿತ ನಿರ್ಗತಿಕ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಪರಾಧಿ ಪತ್ತೆಯಾಗಿ ಶಿಕ್ಷಗೊಳಪಡಬೇಕು ಹಾಗೂ ಭಯ ಮತ್ತು ಪ್ರಾಣ ಭೀತಿಯಿಂದ ತತ್ತರಿಸಿ ಹೋಗಿರುವ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ರವಿ ಹೊಳಿ, ರವಿ ತಳಕೇರಿ, ರವಿ ಅಲಹಳ್ಳಿ, ಮುತ್ತು ಸುಲ್ಪಿ, ಸಾಗರ ಹೊಸಮನಿ, ಶ್ರೀಕಾಂತ ಸೋಮಜ್ಯಾಳ, ಲಕ್ಷ್ಮಣ ಬನ್ನೆಟ್ಟಿ, ಗುರು ಬಿದರಿ ಸೇರಿದಂತೆ ಬನ್ನೆಟ್ಟಿ ಗ್ರಾಮಸ್ಥರು, ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದ

“ಈ ಪ್ರಕರಣ ತಾಲೂಕಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಂದಿದೆ ಎಂದರೆ ಅದು ಪಿಎಸ್‌ಐ, ಸಿಪಿಐ ಮಟ್ಟದಿಂದ ಮುಂದುವರೆದು ಎಸ್ಪಿವರೆಗೆ ಬಂದಿದ್ದು, ಈಗ ಅದು ಎಸ್ಪಿ ಪ್ರಕರಣ ಅಂತ ಪರಿಗಣಿಸಿ ನ್ಯಾಯಾಲಯ ಮತ್ತು ಎಫ್‌ಎಸ್‌ಎಲ್ ಪರಿವಿಡಿಯಲ್ಲಿ ಬರುವುದರಿಂದ ಎಫ್‌ಎಸ್‌ಎಲ್ ವರದಿ ಕೊಟ್ಟು ನ್ಯಾಯಾಲಯ ದಿನಾಂಕ ನಿಗದಿಪಡಿಸಿ ವರದಿ ಸಲ್ಲಿಸಿದ ನಂತರ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದ ನಂತರ ಸಮಯಾವಕಾಶ ಬೇಕಾಗುತ್ತದೆ. ಕಾರಣ ಕೂಲಂಕುಶ ತನಿಖೆಗೆ ಹೋರಾಟಗಾರರು ಸಹಕರಿಸಬೇಕು.”
– ಲಕ್ಷ್ಮಣ ನಿಂಬರಗಿ
ವಿಜಯಪುರ ಎಸ್ಪಿ

