ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರು ಸ್ವಾವಲಂಬಿಗಳಾಗಬೇಕಾದರೆ, ಉದ್ಯಮಶೀಲತೆಯ ಕೌಶಲ್ಯಗಳನ್ನು ಪಡೆಯುವುದು ಅಗತ್ಯ ಎಂದು ವಿಜಯಪುರ ಐಶ್ವರ್ಯ ಜ್ಯೂಟ್ ಹೌಸ್, ಉದ್ಯಮಿ ಯಶೋಧ ಗುಜ್ಜರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ರಾಷ್ಟ್ರೀಯ ಉಚ್ಚತರ ಅಭಿಯಾನ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದ ಅಡಿಯಲ್ಲಿ ‘ವೃತ್ತಿ ಹಾಗೂ ವೈಯಕ್ತಿಕ ಜೀವನ ಸಮತೋಲನ’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಉದ್ಯಮವನ್ನು ಆರಂಭಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ನಮ್ಮ ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ಅಂತಹ ಸವಾಲುಗಳನ್ನು ಮೆಟ್ಟಿನಿಂತು, ಮುನ್ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಸಿಕ್ಯಾಬ್ ಕಾಲೇಜು ಮತ್ತು ಇಂಜಿನಿಯರಿAಗ್ ಟೆಕ್ನಾಲಜಿನ ಸಹಾಯಕ ಪ್ರಾಧ್ಯಾಪಕ ಅಸಿಫ್ ಇಕ್ಬಾಲ್ ಎಂ. ದೊಡ್ಡಮಣಿ ಮಾತನಾಡಿ, ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಮತೋಲನ ಸಾಧಿಸುವುದು ಅಗತ್ಯ, ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ, ಪರಿಶ್ರಮ, ಸಮಯ ಪಾಲನೆ, ಸ್ವ-ಆರೈಕೆ, ಪರಿಣಾಮಕಾರಿ ಸಂವಹನ ಕೌಶಲ್ಯದ ಅಗತ್ಯವಿದೆ. ಇಂದು ಮಹಿಳೆಯರಿಗೆ ಸ್ವಂತ ಉದ್ದಿಮೆಗಳನ್ನು ಆರಂಭಿಸಲು ಹಲವು ಆಯ್ಕೆಗಳಿವೆ ಎಂದರು.
ಕಾರ್ಯಗಾರದಲ್ಲಿ ಫ್ಯೂಷನ್ ಪ್ರೊಫೆಷನಲ್ ಸಲೂನ್‌ನ ಪಲ್ಲವಿ ವೈದಂಡೆ ಮಾತನಾಡಿ, ಮಹಿಳೆಯೊಬ್ಬಳು ಸಮಾಜದಲ್ಲಿ ಯಶಸ್ವಿ ಹಾಗೂ ಸಬಲೀಕೃತಳಾಗಲು ಎದುರಿಸಬೇಕಾದ ಅವಕಾಶಗಳು ಮತ್ತು ಅಡೆತಡೆಗಳನ್ನು ಒಪ್ಪಿಕೊಂಡು ಭಾಗವಹಿಸಿದವರನ್ನು ಪ್ರೇರೇಪಿಸಿದರು. ಜೊತೆಗೆ ಅವರು ದೈಹಿಕ ಅಂಗವೈಕಲ್ಯ ಹೊಂದಿದವರಿಗಾಗಿ ಕೈಗೊಂಡ ದಾನಶೀಲ ಚಟುವಟಿಕೆಗಳನ್ನು ತಿಳಿಸಿದರು. ಮಹಿಳೆಯರು ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಹಾಗೂ ಇತರ ಹಲವು ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದ ಸಂಯೋಜಕಿ ಪ್ರೊ.ಅನಿತಾ ಆರ್ ನಾಟಿಕರ್ ಕಾರ್ಯಾಗಾರದ ಪ್ರಯೋಜನಗಳನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದರು.
ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಮಠಪತಿ, ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗಗಳ ಅಥಿತಿ ಉಪನ್ಯಾಸಕರು ಹಾಗೂ ಒಟ್ಟು ಮೂವತ್ತು ವೃತ್ತಿನಿರತ ಮಹಿಳೆಯರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಸಂಯೋಜಕ ಡಾ.ಎಸ್ ಆರ್ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

