ಉಮರಜದಲ್ಲಿ ರಾಷ್ಟ್ರಗೀತೆಯೊಂದಿಗೆ ನಾಡದೇವಿ ಪ್ರಭಾತಪೇರಿ ೬೯ರ ಸಂಭ್ರಮ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೯ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.
ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.
೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟçಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ ನಡೆಯಿತು. ಮಕ್ಕಳು ರಾಷ್ಟçಧ್ವಜ ಹಿಡಿದು ದೇಶಭಕ್ತಿಯ ಭಾವನೆಯೊಂದಿಗೆ ಪ್ರಭಾತಪೇರಿಯಲ್ಲಿ ಸಾಗಿದರು.
“ನಡೆಯಿರಿ ಸಾಗಿರಿ ಕನ್ನಡದ ವೀರರೇ, ಹಿಡಿಯಿರಿ ಭಾರತಾಂಭೆಯ ಧ್ವಜವ, ಹೊಡೆಯಿರಿ ಜಯ ಘೋಷವ”. “ಮುತ್ಯಾ ಗಾಂಧಿ ಮುತ್ಯಾ, ನಮ್ಮೇಲ್ಲರ ಪ್ರೀತಿಯ ಮುತ್ಯಾ ನೀನು, ಸ್ವಾತಂತ್ರö್ಯ ತಂದು ಕೊಟ್ಟೆ ನೀನು”. “ಝಣ ಝಣ ಝಣ ಕಾಂಚನದಲ್ಲಿ ಅಮೇರಿಕಾದ ಲಾಂಛನದಲ್ಲಿ”
ಹೀಗೆ ಹತ್ತು ಹಲವು ಹಾಡುಗಳನ್ನು ಹಾಡುತ್ತ, ಜಯ ಘೋಷಗಳನ್ನು ಮೊಳಗಿಸುತ್ತಾ ಸಾಗಿದರು. ಆ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ರಸ್ತೆಯ ಮೇಲೆ ವಿವಿಧ ರಂಗೋಲಿಗಳ ಚಿತ್ತಾರ ಬಿಡಿಸಿದರು. ಅಲ್ಲದೇ ದೇವಿಯ ಭಾವಚಿತ್ರಕ್ಕೆ ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಪ್ರಭಾತಪೇರಿಯಲ್ಲಿ ಪಾಲ್ಗೊಂಡು ಸಂತಸದಿಂದ ಹೆಜ್ಜೆ ಹಾಕಿದರು.
ಈ ವೇಳೆಯಲ್ಲಿ ಶಿಕ್ಷಕರಾದ ಚಿಕ್ಕಯ್ಯ ಮಠಪತಿಯವರು ಮಾತನಾಡುತ್ತ. ‘ನಮ್ಮ ಗ್ರಾಮವು ಮಹಾರಾಷ್ಟ್ರದ ಗಡಿ ಭಾಗವಾಗಿದ್ದರಿಂದ ಹಲವು ವರ್ಷಗಳಿಂದ ಗ್ರಾಮಸ್ಥರೆಲ್ಲರೂ ಕನ್ನಡಾಭಿಮಾನದಿಂದಾಗಿ ಪ್ರಭಾತಪೇರಿಯನ್ನು ಆಚರಿಸಿಕೊಂಡು ಬಂದಿದ್ದೇವೆ. ೧೯೯೦ರಿಂದ ನಾಡದೇವಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡುವುದರ ಮೂಲಕ ಈ ಪ್ರಭಾತಪೇರಿಗೆ ಇನ್ನಷ್ಟು ಮೆರಗು ದೊರಕಿದಂತಾಗಿದೆ’ ಎಂದು ಹೇಳಿದರು

