ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಾರಾಷ್ಟ್ರದ ಉಜನಿ, ವೀರ, ಸೀನಾ ಜಲಾಶಯದಿಂದ 3.50 ಲಕ್ಷ ಕ್ಯೂಸೆಕ್ ನೀರು ಭೀಮಾನದಿಗೆ ಹರಿಬಿಟ್ಟಿರುವುದರಿಂದ ಭೀಮಾನದಿ ತೀರದಲ್ಲಿ ಪ್ರವಾಹ ಉಂಟಾಗಿರುವುದರಿಂದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
ತಾಲೂಕಿನ ಹಾವನೂರ,ಶಿರವಾಳ,ಗೌರ(ಬಿ),ನಂದರಗಾ, ಜೇವರ್ಗಿ(ಬಿ), ಮಣ್ಣೂರ, ಸೊನ್ನ ಬ್ಯಾರೇಜ್,ಘತ್ತರಗಾ ಗ್ರಾಮಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಪ್ರವಾಹ ಸೃಷ್ಟಿಯಾಗಿದೆ.ಹೀಗಾಗಿ ಜನರು ನದಿ ದಡದ ಕಡೆ ಹೋಗದೆ ಜಾಗೃತಿಯಿಂದ ಇರಬೇಕು. ಮನೆಗಳಿಗೆ ನುಗ್ಗಿರುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿ ಜನರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಣ್ಣೂರ ಮತ್ತು ದೇವಲ ಗಾಣಗಾಪುರ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ದಿನನಿತ್ಯದ ನೀರಿನ ಪ್ರಮಾಣವನ್ನು ಜನರಿಗೆ ತಿಳಿಯುವಂತೆ ಗ್ರಾಮದಲ್ಲಿ ಡಂಗುರ ಸಾರಿ ತಿಳಿಸಲಾಗುವುದು. ಹೀಗಾಗಿ ಗ್ರಾಮಸ್ಥರೆಲ್ಲರೂ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ,ನಿಮ್ಮ ಜತೆ ಜಿಲ್ಲಾಡಳಿತ ಗಟ್ಟಿಯಾಗಿ ನಿಂತಿದೆ ಎಂದರು.
ಜಿಪಂ ಸಿಇಒ ಭಂವರಾಸಿಂಗ್ ಮೀನಾ ಮಾತನಾಡಿ, ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಯುತ್ತಿದ್ದರೆ ಗ್ರಾಪಂ ವತಿಯಿಂದ ಬಗೆಹರಿಸಲಾಗುವುದು. ಈಗಾಗಲೇ ಸಂಬಂಧಪಟ್ಟ ಆಯಾ ಪಿಡಿಒಗಳು ಕಡ್ಡಾಯವಾಗಿ ಕಾರ್ಯಸ್ಥಳದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಕಾಳಜಿ ಕೇಂದ್ರದಲ್ಲಿ ಗುಣಮಟ್ಟದ ಆಹಾರ ಒದಗಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತೆ ಸಾಹಿತ್ಯೆ ಆಲದಕಟ್ಟೆ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಶಂಕರಗೌಡ ಪಾಟೀಲ್, ಬಾಬುರಾವ್ ಜ್ಯೋತಿ ಮುಖಂಡರಾದ ಅರುಣಕುಮಾರ ಪಾಟೀಲ್ ಉಪಸ್ಥಿತರಿದ್ದರು.

