ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಬನ್ನಟ್ಟಿ ಪಿಎ ಗ್ರಾಮದಲ್ಲಿ ದಲಿತ ವ್ಯಕ್ತಿಯ ಕೊಲೆಯ ಪ್ರಕರಣದ ಕುರಿತಾಗಿ ಕಳೆದ ನಾಲ್ಕು ತಿಂಗಳಿನಿಂದಲೂ ಆರೋಪಿಯನ್ನು ಬಂಧಿಸದ ಪೊಲೀಸರ ವಿರುದ್ಧ ಎಲ್ಲಾ ದಲಿತಪರ ಸಂಘಟನೆಗಳ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ವೃತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೭ನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೊಳಿ ಬಂಟನೂರ ಮಾತನಾಡಿ, ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿ ಕೊಲೆಯಾಗಿ ೪ತಿಂಗಳುಗಳ ಕಾಲ ಕಳೆದರೂ ಕೊಲೆಗಾರರನ್ನು ಬಂಧಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಆರಂಭವಾದ ಅಹೋರಾತ್ರಿ ಧರಣಿ ಸತ್ಯಾಗ್ರಹ ೭ನೆಯ ದಿನಕ್ಕೆ ಕಾಲಿಟ್ಟಿದೆ. ಮಾನವೀಯತೆ ನೆಲೆಗಟ್ಟಿನ ಮೇಲೆ ಸೌಜನ್ಯಕ್ಕೂ ಸಾವಿನ ಮನೆಗೆ ಭೇಟಿ ನೀಡದ ಹಾಲಿ ಹಾಗೂ ಮಾಜಿ ಶಾಸಕರ ನಡೆಗೆ ಧಿಕ್ಕಾರ ಎಂದು ಖಂಡಿಸಿದ್ದಾರೆ. ದೀನದಲಿತರು, ಹಿಂದುಳಿದವರ ಮತಗಳನ್ನು ಪಡೆದು ಅವರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ದಲಿತರ ಹಿಂದುಳಿದವರ ಕೊಲೆಗಳಾದಾಗ ಯಾವ ಒಬ್ಬ ರಾಜಕಾರಣಿಯು ಮುಂದೆ ಬಂದು ಸಾಂತ್ವನ ಹೇಳುವಂತ ಮಾನವೀಯತೆ ಇಲ್ಲದಿರುವುದು ವಿಷಾದಕರ ಸಂಗತಿ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸದೇ ಹೊದರೆ ಹೋರಾಟ ಇನ್ನೂ ಉಗ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

