ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಾರಾಷ್ಟ್ರದಿಂದ ಅತಿಯಾದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಪ್ರವಾಹ ಹೆಚ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು
ಅವರು ತಾಲೂಕಿನ ಸೊನ್ನ ಬ್ಯಾರೇಜ್ ಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು.
ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಅಪಾರ ಪ್ರಮಾಣದ ನೀರನ್ನು ಭೀಮ ನದಿಗೆ ಹರಿಬಿಟ್ಟ ಕಾರಣ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಿಂದ ಈವರೆಗೂ ಸುಮಾರು 3.20 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜನರ ಓಡಾಟಕ್ಕೆ ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಭೀಮಾ ನದಿ ನೀರಿನ ಮಟ್ಟ ಏರಿಕೆಯಿಂದ ನೆರೆ ಸೃಷ್ಟಿಯಾಗಿದ್ದು, ನದಿ ತೀರದಲ್ಲಿರುವ ನಿವಾಸಿಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಅಗತ್ಯ ಇರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ 26ರ ವೇಳೆಗೆ ಸರಾಸರಿ 619 ಮಿಲಿ ಮೀಟರ್ ವಾಡಿಕೆ ಮಳೆ ಸುರಿಯುತ್ತಿತ್ತು. ಆದರೆ ಈ ವರ್ಷ 915 ಮಿ.ಮೀಗಿಂತಲೂ ಅಧಿಕ ಮಳೆ ಸುರಿದಿರುವುದರಿಂದ ವ್ಯಾಪಕ ಅನಾಹುತವಾಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿದ ನಂತರ ಮತ್ತೊಮ್ಮೆ ಭೇಟಿ ನೀಡಿ, ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದರು.

