ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತ ಬಾಂಧವರು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ,ಶೇಂಗಾ, ಮೆಣ್ಣೆಹೋಳ, ಹತ್ತಿ, ಈರುಳ್ಳಿ ಸೇರಿದಂತೆ ಇನ್ನುಳಿದ ಬೆಳೆಗಳು ವಿಪರೀತ ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿವೆ. ವೈಜ್ಞಾನಿಕ ಸಮೀಕ್ಷೆ ನಡೆಸಿ ಎಲ್ಲ
ಬೆಳೆಗಳಿಗೂ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಮೂಲಕ ಮನವಿ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿ ವರ್ಷ ರೈತರು ಒಂದಿಲ್ಲೊಂದು ರೀತಿಯಿಂದ ಬೆಳೆಗಳು ಹಾನಿಯಾಗಿ ಒಂದಿಲ್ಲೊಂದು ರೀತಿಯಿಂದ ಬೆಳೆಗಳು ಹಾನಿಯಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಬೆಳೆ ಕೈ ಸೇರದೆ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಚಿಂತೆಗೀಡಾಗಿದ್ದಾರೆ. ಕೂಡಲೇ ಸರ್ಕಾರ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸೂಕ್ತ ವರದಿಯನ್ನು ಸರ್ಕಾರ ತರಿಸಿಕೊಂಡು ಪ್ರತಿ ಬೆಳೆಗೆ ಎಕರೆಯಂತೆ ಸೂಕ್ತ ಪರಿಹಾರ ಒದಗಿಸಬೇಕು. ಕಳೆದ ವರ್ಷ ಸರಿಯಾಗಿ ಸಮೀಕ್ಷೆ ಮಾಡದೇ ಎಲ್ಲೋ ಕಛೇರಿಯಲ್ಲಿ ಕುಳಿತು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಹೆಚ್ಚಿನ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಅದರಲ್ಲಿ ಗ್ರಾಮ ಪಂಚಾಯತಿಯವರು ಸರಿಯಾಗಿ ಸಮೀಕ್ಷೆಯನ್ನು ಮಾಡುವದಿಲ್ಲ. ಇವರು ಮಾಡಿದ ತಪ್ಪಿನಿಂದಲೇ ಕಳೆದ ವರ್ಷ ಇಂಗಳೇಶ್ವರ ಗ್ರಾಮ ಸೇರಿದಂತೆ ವಿವಿಧ ಹಳ್ಳಿಯ ರೈತರು ಹಾನಿಗೊಳಗಾದ ತೊಗರಿ ಪರಿಹಾರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರಿಯಾಗಿ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲಿಕಾರ ಮಾತನಾಡಿ, ಕುಂಭದ್ರೋಣ ಮಳೆಯಿಂದಾಗಿ ಜಮೀನುಗಳಿಗೆ ಹಾಗೂ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ಜನರು ತಿರುಗಾಡಲು ತೊಂದರೆಯಾಗಿದೆ. ಇದರಲ್ಲಿ ಯರನಾಳ ಗ್ರಾಮದ ಸರ್ಕಾರಿ ರಸ್ತೆ ಜಮೀನುಗಳಿಗೆ ಹೊಂದಿಕೊಂಡು ಹೋಗಿದ್ದು ಅದು ಸಂಪೂರ್ಣ ಕೊಳಚೆ ಗುಂಡಿಯಂತಾಗಿದೆ. ಇಂತಹ ರಸ್ತೆಯಲ್ಲಿಯೇ ರೈತರು ಹರಸಾಹಸ ಪಟ್ಟು ಜಮೀನುಗಳಿಗೆ ತೆರಳುವುದು ಅನಿವಾರ್ಯವಾಗಿದೆ. ಕೂಡಲೇ ಈ ರಸ್ತೆಯನ್ನು ಸಂಬಂಧಿಸಿದ ಇಲಾಖೆಯವರೂ ದುರಸ್ಥಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಮೇಶ ವಾಲೀಕಾರ,ಚಂದ್ರಾಮ ತೆಲ್ಲ,ಚಂದಪ್ಪ ವಾಲಿಕಾರ, ಶಂಕ್ರಪ್ಪ ಮಳ್ಳಿ, ಭೀಮಪ್ಪ ಮಳ್ಳಿ, ಶೇಖಪ್ಪ ಹೊಸಮನಿ, ಯಲ್ಲಪ್ಪ ದಿನ್ನಿ, ಅಶೋಕ ಜಂಗಮಶೆಟ್ಟಿ, ಸುರೇಶ ಅನ್ನಿ, ನಿಂಗಪ್ಪ ಗಾಣಿಗೇರ, ಶಿವಪ್ಪ ಹಾಲಗೇರಿ, ಬಸಪ್ಪ ಬ್ಲಾಕೊಂಡ, ಶಿವಪ್ಪ ಆಲಗೊಂಡ, ಗಜಾನನ ನಾಗರಾಳ, ಶ್ರೀಶೈಲ ಮಳ್ಳಿ ಇತರರು ಇದ್ದರು.

