ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮನುಷ್ಯ ಜನ್ಮ ಸಾರ್ಥಕತೆ ಹೊಂದುವುದು ಸೇವೆಯಿಂದ ಮಾತ್ರ. ಸೇವೆಯ ಪ್ರತಿಫಲ ಸೇವೆಯೇ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಶೈಲ ಬಳವಾಟ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನಾ ಘಟಕದ ಸಂಸ್ಥಾಪನಾ ದಿನದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈ ಜಗತ್ತಿನಲ್ಲಿ ಹಣ,ಐಶ್ವರ್ಯದಿಂದ ಶಾಶ್ವತ ಕೀರ್ತಿ ಪಡೆಯಲು ಸಾಧ್ಯವಿಲ್ಲ. ಸೇವೆಯಿಂದ ಮಾತ್ರ ಶಾಶ್ವತ ಕೀರ್ತಿ ಪಡೆಯಲು ಸಾಧ್ಯ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಬಿ. ಹೊಸಮನಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಗ್ರಾಮಗಳ ಉದ್ಧಾರದ ಕನಸಿಗೆ ಎನ್.ಎಸ್.ಎಸ್ ಚಟುವಟಿಕೆಗಳು ಪೂರಕವಾಗಿವೆ. ಎಲ್ಲಾ ವಿದ್ಯಾರ್ಥಿಗಳು ಸ್ವಯಂ ಸ್ಫೂರ್ತಿಯಿಂದ ಸೇವೆ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ಡಾ.ಅಮಿತ್ ಮಿರ್ಜಿ,ದೈಹಿಕ ಶಿಕ್ಷಣ ನಿರ್ದೇಶಕಿ ರೇಣುಕಾ ಅಂಬಲಿ , ಇಂಗ್ಲೀಷ್ ವಿಭಾಗದ ಪ್ರಿಯಾಂಕ ಜಿಂದೆ ಇತರರು ಇದ್ದರು. ರಾಜ್ಯಶಾಸ್ತ್ರ ವಿಭಾಗದ ಡಾ. ಹೆಚ್. ಎಂ. ನಾಟಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಸಾಕ್ಷಿ ಕಲ್ಲೂರ ಸ್ವಾಗತಿಸಿದರು. ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ ಸುರೇಶ ಹಿಟ್ನಳ್ಳಿ ನಿರೂಪಿಸಿದರು. ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ದಾನೇಶ್ವರಿ ನಾಯ್ಕೊಡಿ ವಂದಿಸಿದರು.

