ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಕರಲ್ಲಿ ಸಮಾಜಸೇವಾ ಮನೋಭಾವ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ರಾಷ್ಟ್ರೀಯ ಸೇವಾ ಯೋಜನೆ ತನ್ನ ೫೬ನೇ ವರ್ಷದ ಪಯಣವನ್ನು ಪೂರೈಸಿದೆ ಎಂದು ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶದ ಅ.ಬ, ಸ್ನಾತಕ, ಮುಕ್ತ ಮತ್ತು ಶಿಕ್ಷಣ ಘಟಕಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ೧೯೬೯ರ ಸೆಪ್ಟೆಂಬರ್ ೨೪ರಂದು ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆ, ಯುವಕರು ಶಿಕ್ಷಣದ ಜೊತೆಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡುವ ಉದ್ದೇಶದಿಂದ ರೂಪುಗೊಂಡಿದೆ. ಸೇವಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ಕಟ್ಟಿಕೊಡಲು ಈ ಯೋಜನೆ ನೆರವಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆದು, ನಾಯಕತ್ವದ ಗುಣಗಳನ್ನು ಕಲಿಯಲು ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ವಿವಿಯ ಎನ್‌ಎಸ್‌ಎಸ್ ಕೋಶದ ಸಂಯೋಜಕ ಪ್ರೊ.ಅಶೋಕಕುಮಾರ ಸುರಪುರ, ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಮತ್ತು ಸಮಾಜಸೇವಾ ಮನೋಭಾವವನ್ನು ಬೆಳೆಸಲು ಮಹತ್ವದ ಪಾತ್ರವಹಿಸುತ್ತದೆ. ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಾಧ್ಯವಾದಷ್ಟು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿದರೆ ಮಾತ್ರ ಅವರ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಸಿತವಾಗುತ್ತದೆ. ಈ ಸಲಹೆ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮತ್ತು ಸಮಾಜ ಸೇವೆ ನಡುವಿನ ಸಮತೋಲನವನ್ನು ಸಾಧಿಸಲು ಪ್ರೇರಣೆಯಾಗಿದ್ದು, ಯುವಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಹೆಚ್ಚಿಸಲು ಸಹಾಯಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಅಮರನಾಥ್ ಪ್ರಜಾಪತಿ ಮತ್ತು ಎಲ್ಲಾ ಎನ್‌ಎಸ್‌ಎಸ್ ಘಟಕಗಳ ಸ್ವಯಂಸೇವಕಿಯರು ಸಕ್ರಿಯವಾಗಿ ಭಾಗವಹಿಸಿದ್ದರು.
ಸ್ವಯಂಸೇವಕಿಯರಾದ ರಾಣಿ, ಸೀಮಾ ಮತ್ತು ಅಮೃತಾ ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಗುಲಾಬ್ ರಾಠೋಡ್ ಸ್ವಾಗತಿಸಿದರು. ಎನ್‌ಎಸ್‌ಎಸ್ ಸ್ನಾತಕ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕಲಾವತಿ ಎಚ್.ಕಾಂಬಳೆ ನಿರೂಪಿಸಿದರು. ಎನ್‌ಎಸ್‌ಎಸ್ ಮುಕ್ತ ಘಟಕದ ಕಾರ್ಯಕ್ರಮಾಧಿಕಾರಿ ಡಾ. ದೀಪಕ್ ಶಿಂಧೆ ವಂದಿಸಿದರು.

