ಟೆಂಡರ್ ಕರೆಯದೆ ಲ್ಯಾಂಡ್ ಆರ್ಮಿ ಅಧೀನದಲ್ಲಿಟ್ಟುಕೊಂಡು ಅನುದಾನ ಲೂಟಿ | ಶಾಸಕ ಪಾಟೀಲ್ ನಾಪತ್ತೆ, ತಾಲೂಕು ಆಡಳಿತ ಮಗನ ಕೈಗೆ | ಬಿಜೆಪಿ ಮುಖಂಡ ನಿತೀನ್ ಗುತ್ತೇದಾರ ಗಂಭೀರ ಆರೋಪ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕಾಗಿ 2 ಕೋಟಿ ಅನುದಾನ ಮಂಜೂರು ಮಾಡಿಸಿ ಗುಂಡಿ ಮುಚ್ಚದೆ ಎಲ್ಲಾ ಅನುದಾನ ಶಾಸಕ ಎಂ.ವೈ ಪಾಟೀಲ್ ಮನೆ ಸೇರಿದೆ ಎಂದು ಬಿಜೆಪಿ ಮುಖಂಡ ನಿತೀನ್ ಗುತ್ತೇದಾರ ಗಂಭೀರ ಆರೋಪ ಮಾಡಿದರು.
ಅವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಅಫಜಲಪುರ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡುತ್ತಾ ಶಾಸಕ ಎಂ.ವೈ ಪಾಟೀಲ್ ಜನರಿಂದ ಆಯ್ಕೆಯಾರೂ ಕೂಡ ಜನರ ಸೇವೆ ಮಾಡುತ್ತಿಲ್ಲ. ಪ್ರವಾಹದ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್ ಜನರ ಸಮಸ್ಯೆ ಆಲಿಸಲು ಬರಬೇಕಾಗಿತ್ತು. ಆದರೆ ಎಲ್ಲಿ ನಾಪತ್ತೆ ಆಗಿದ್ದಾರೋ? ಅಥವಾ ಶಾಸಕರಿಗೆ ಮುಚ್ಚಿಟ್ಟಿದ್ದಾರೋ ಅರ್ಥವಾಗುತ್ತಿಲ್ಲ. ಶಾಸಕರ ಹೆಸರಲ್ಲಿ ಅವರ ಮಗನೇ ಕಾರುಬಾರು ಮಾಡುತ್ತಿದ್ದಾನೆ. ಜನರಿಂದ ಆಯ್ಕೆಗೊಳ್ಳದಿದ್ದರೂ ತಾನೇ ಶಾಸಕ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಅಲ್ಲದೆ ಬೆಳೆ ವಿಕ್ಷಣೆ ನೆಪದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ತಿರುಗುತ್ತಿದ್ದಾರೆ. ಈ ನಡೆ ಅಧಿಕಾರಿಗಳಿಗೂ ಶೋಭೆ ತರುವಂತದ್ದಲ್ಲ. ಇನ್ನೂ ಮುಂದಾದರೂ ಅಧಿಕಾರಿಗಳು ಸರ್ಕಾರದ ಸಂಬಳ ಪಡೆದು ಜನರಿಗಾಗಿ ಕೆಲಸ ಮಾಡಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ಎಲ್ಲರ ನಿಜಾಂಶ ಬಯಲಿಗೆಳೆಯಬೇಕಾಗುತ್ತದೆ ಎಂದು ಗುಡುಗಿದರು.
ಕಳೆದ ಬಾರಿಯ ಪ್ರವಾಹ ಸಂದರ್ಭದಲ್ಲಿ ಬೆಳೆ ಪರಿಹಾರ 46.65 ಕೋಟಿ ಅನುದಾನ ಬಂದಿತ್ತು. ಈ ಪೈಕಿ 21.5 ಕೋಟಿ ಮಾತ್ರ ಪರಿಹಾರ ಬಂದಿದೆ. ಫರಹತಾಬಾದ್ ವಲಯದಲ್ಲಿ 14 ಕೋಟಿ ಅನುದಾನದಲ್ಲಿ ಕೇವಲ 6 ಕೋಟಿ ಮಾತ್ರ ಬಂದಿದ್ದು 8 ಕೋಟಿ ಬಾಕಿ ಇದೆ. ಫರಹತಾಬಾದ್ ವಲಯ ಸೇರಿ ಮತಕ್ಷೇತ್ರಕ್ಕೆ 32 ಕೋಟಿ ಬಾಕಿ ಹಣ ಬಿಡುಗಡೆಗೊಂಡಿಲ್ಲ. ಈ ವರ್ಷದ ಪ್ರವಾಹದಿಂದ ಉಂಟಾದ ಹಾನಿ ಕುರಿತು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಅರ್ಹರಿಗೆ ಸೂಕ್ತ ಪರಿಹಾರ ತಲುಪಿಸುವಂತ ಕೆಲಸ ಶಾಸಕರು ಮಾಡಬೇಕು ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಈ ಬಾರಿ 65 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ. ಆದರೆ ಅಧಿಕಾರಿಗಳು ಮಾತ್ರ ಕಡಿಮೆ ಕ್ಷೇತ್ರ ತೋರಿಸುತ್ತಿದ್ದಾರೆ. ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ನಿರ್ಲಕ್ಷö್ಯ ತೋರುತ್ತಿದ್ದಾರೆ ಇದರಿಂದ ತಾಲೂಕಿನ ರೈತರಿಗೆ ಸಮಸ್ಯೆ ಆಗುತ್ತಿದೆ ಎಂದು ಕಿಡಿ ಕಾರಿದರು.
ಇನ್ನೂ ತಾಲೂಕಿನಲ್ಲಿ ಲ್ಯಾಂಡ್ ಆರ್ಮಿ ಇಲಾಖೆಯ ಹೆಸರಿನಲ್ಲಿ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಕೆಲಸ ಮಾಡದೆ ಕೋಟ್ಯಾಂತರ ರೂಪಾಯಿ ಅನುದಾನ ನುಂಗಿ ಹಾಕಲಾಗಿದೆ. 2018ರಿಂದ ಇಲ್ಲಿವರೆಗೆ ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಂಡಿಲ್ಲ. ಆದರೆ ಶಾಸಕರ ಪುತ್ರರು ಇಲಾಖೆ ಅಧಿಕಾರಿಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಅನುದಾನವನ್ನು ಸರ್ಕಾರದ ಖಜಾನೆಯಿಂದ ನೇರವಾಗಿ ತಮ್ಮ ಮನೆಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್ ಮಾತನಾಡುತ್ತಾ ರಾಜ್ಯದಲ್ಲಿ ಜನವಿರೋಧಿ ಸರ್ಕಾರವಿದೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪರದಾಡುತ್ತಿದ್ದರೆ, ಕುರ್ಚಿ ಕಿತ್ತುಕೊಳ್ಳಲು ಡಿಕೆಶಿ ಸಂಚು ರೂಪಿಸುತ್ತಾರೆ. ಇವರಿಗೆ ರಾಜ್ಯದ ಜನರ ಕಾಳಜಿ ಇಲ್ಲ. ಆದಷ್ಟು ಬೇಗ ಈ ದುಷ್ಟ ಸರ್ಕಾರ ತೊಲಗಿ ಜನಪರ ಸರ್ಕಾರ ರಚನೆ ಆಗಲಿದೆ ಎಂದರು.
ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಶೋಕ ಬಗಲಿ, ರಮೇಶ ನಿಲಗಾರ, ನಾಗೇಶ ಕೊಳ್ಳಿ, ಸಚಿನ್ ರಾಠೋಡ, ಬಸವರಾಜ ವಾಳಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾಧರ ಮಂಗಳೂರೆ, ಶ್ರೀಶೈಲ್ ಡಾಂಗೆ, ಮಲ್ಲಿಕಾರ್ಜುನ ನಿಂಗದಳ್ಳಿ, ರಮೇಶ ಬಾಕೆ, ಬೀರಣ್ಣ ಕಲ್ಲೂರ, ಸುನೀಲ್ ಶೆಟ್ಟಿ, ಮಳೇಂದ್ರ ಡಾಂಗೆ, ವಿಶ್ವನಾಥ ರೇವೂರ, ಶೈಲೇಶ ಗುಣಾರಿ, ಶರಣು ಪದಕಿ, ಶಂಕು ಮ್ಯಾಕೇರಿ, ಗುರು ಸಾಲಿಮಠ, ತನ್ವೀರ ಮಣೂರ, ಅರವಿಂದ ದೊಡ್ಮನಿ, ಶ್ರೀಕಾಂತ ರೆಡ್ಡಿ, ರಾಜು ಸಂಗೋಳಗಿ, ಮಹಾಂತೇಶ ಬಳೂಂಡಗಿ, ಪಾಶಾ ಮಣೂರ, ಗಿರೀಶ ಉಡಗಿ, ರಾಘವೇಂದ್ರ ಮಠಪತಿ, ಬೀರಣ್ಣ ಕನಕಟೇಲರ್, ರಾಚಯ್ಯ ಸ್ವಾಮಿ, ಭಗವಂತ ವಗ್ಗೆ, ರಾಜು ಆರೇಕರ, ಶಿವು ಹೊಸಮನಿ, ಚಿದಾನಂದ ಬಸರಿಗಿಡ, ಈರಣ್ಣ ಶಂಕರಶೆಟ್ಟಿ, ಶರಣಗೌಡ ಪೊಲೀಸ್‌ಪಾಟೀಲ್, ಭಗವಂತರಾಯ ಬಳೂಂಡಗಿ ಆನೂರ ಸೇರಿದಂತೆ ಅನೇಕರು ಇದ್ದರು.

