ಮ್ಯಾನುವೆಲ್ ಸ್ಕಾರಿಯವೆಂಜರ್ ನಿಷೇಧ | ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೧೩ರ ಕಾಯ್ದೆಯನ್ವಯ ಮ್ಯಾನುವೆಲ್ ಸ್ಕ್ಯಾವೆಂಜರ್‌ವನ್ನು ನಿಷೇಧಿಸಲಾಗಿದ್ದು, ಸ್ವಚ್ಛತಾ ಕರ್ಮಿಗಳಿಗೆ ಸರ್ಕಾರದಿಂದ ನೀಡಲಾಗಿರುವ ರಕ್ಷಣಾ ಪರಿಕರಗಳನ್ನು ವಿತರಣೆ ಮಾಡುವುದರೊಂದಿಗೆ ಅವುಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ೨೦೧೩ರನ್ವಯ ಜಿಲ್ಲಾ ಮಟ್ಟದ ೩ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಸ್ಕ್ಯಾವೆಂಜರ್‌ಗಳು ಮತ್ತು ಕುಟುಂಬಗಳಿಗೆ ಪುನರ್ವಸತಿ ಮತ್ತು ಪರ್ಯಾಯ ಉದ್ಯೋಗಗಳನ್ನು ಒದಗಿಸಲು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಕರ್ಮಿಗಳಿಗೆ ಕಡ್ಡಾಯವಾಗಿ ಯೂನಿಪಾರ್ಮ್ ಹಾಗೂ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ವಿತರಣೆ ಮಾಡಬೇಕು. ಸಂಗ್ರಹಿಸಿದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನು ಸಂಬAಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. ಕಾಲಕಾಲಕ್ಕೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು. ಪೌರಕಾರ್ಮಿಕರ ಮಕ್ಕಳ ಉತ್ತಮ ಶಿಕ್ಷಣ ನೀಡಿ, ಉನ್ನತ ಹುದ್ದೆಗೆ ಹೊಂದಲು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಫಾಯಿ ಕರ್ಮಚಾರಿ ನಾಮ ನಿರ್ದೇಶಕರಾದ ಡಾ. ಬಾಬು ಸಜ್ಜನ ಅವರು ಮಾತನಾಡಿ ನಗರ ಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಂಡುಬರುತ್ತಿದೆ. ಈ ಕುರಿತು ಸೂಕ್ತ ಜಾಗೃತಿ-ತಿಳುವಳಿಕೆ ಮೂಡಿಸಲು ಅಧಿಕಾರಿಗಳು ಕ್ರಮ ವಹಿಸಲು ಕೋರಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು, ಕಸ ಕಂಡರೆ ಪೋಟೋ ಕಳಸಿ ಅಭಿಯಾನದಡಿ ಸ್ವಚ್ಛತೆ ಕಾಪಾಡುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಲಕ್ಷö್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿವಿ ಕುಂಬಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದೀನ ಸೌಧಾಗರ, ಸಮಾಜ ಕಲ್ಯಾಣದ ಉಪ ನಿರ್ದೇಶಕರಾದ ಮಹೇಶ ಪೋತ್ದಾರ, ಸಹಾಯಕ ನಿರ್ದೇಶಕರಾದ ಬಿ.ಜೆ.ಇಂಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಸಂಗಣಗೌಡ ಪಾಟೀಲ, ಸಫಾಯಿ ಕರ್ಮಚಾರಿ ನಾಮ ನಿರ್ದೇಶಕರುಗಳಾದ ಬಬಿನಾಬಾಯಿ ನಾಗರಾಳ ಹಾಗೂ ಹಣಮಂತ ಕೊಡಗಾನೂರ ಸೇರಿದಂತೆ ತಾಲೂಕಿನ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

